ಐಪಿಎಲ್:ರಾತೋರಾತ್ರಿ ಬ್ಯಾಟಿಂಗ್ ನಲ್ಲಿ ಮಿಂಚು ಹರಿಸಿದ ರಾಹುಲ್ ತೆವಾತಿಯಾ

Update: 2020-09-28 08:54 GMT

ಹೊಸದಿಲ್ಲಿ,ಸೆ.28: ಶಾರ್ಜಾದಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ರಾಹುಲ್ ತೆವಾತಿಯಾ ರಾತೋರಾತ್ರಿ ಪ್ರಸಿದ್ಧಿಗೆ ಬಂದಿದ್ದಾರೆ. ಇನ್ನು ಮುಂದೆ ರಾಹುಲ್ ಹೆಸರು ಯಾರೂ ಮರೆಯಲಾರರು.

ಹಲವು ಐಪಿಎಲ್ ತಂಡಗಳಲ್ಲಿದ್ದ ಹರ್ಯಾಣದ ಕ್ರಿಕೆಟಿಗ ರಾಹುಲ್ ಒಂದು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದರು. ರವಿವಾರ ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನದ ಪರ ಒಂದು ಶ್ರೇಷ್ಠ ಇನಿಂಗ್ಸ್ ಆಡಿದರು. ರಾಜಸ್ಥಾನ ತಂಡ 224 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ನೆರವಾದರು.

ರಾಹುಲ್ ಅಬ್ಬರಿಸುವ ಮೊದಲು ಪಂದ್ಯದಲ್ಲಿ ನಮ್ಮದೇ ಗೆಲುವು ಎಂದು ನಂಬಿದ್ದೆವು ಎಂದು ಪಂಜಾಬ್ ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ. ಆರಂಭದಲ್ಲಿ ಲಯ ಕಂಡುಕೊಳ್ಳಲು ತಿಣುಕಾಡಿದ ರಾಹುಲ್ ತೆವಾತಿಯಾ ಸತತವಾಗಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಎದುರಾಳಿ ಪಂಜಾಬ್ ತಂಡಕ್ಕೆ ಶಾಕ್ ನೀಡಿದರು.

ರಾಜಸ್ಥಾನಕ್ಕೆ ಗೆಲ್ಲಲು ಅಂತಿಮ 18 ಎಸೆತಗಳಲ್ಲಿ 51 ರನ್ ಅಗತ್ಯವಿತ್ತು. ಶೆಲ್ಡನ್ ಕಾಟ್ರೆಲ್ ಅವರು ಎಸೆದ 18ನೇ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿದ ತೆವಾತಿಯಾ ಪಂದ್ಯದ ದಿಕ್ಕನ್ನೇ ಬದಲಿಸಿದರು. ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದ ರಾಹುಲ್ ಅವರು ಕ್ರಿಸ್ ಗೇಲ್ ಅವರ ಐಪಿಎಲ್‌ನ ಓವರ್‌ರೊಂದರ ಸಿಕ್ಸರ್ ದಾಖಲೆಯನ್ನು ಸರಿಗಟ್ಟಿದರು.

19ನೇ ಓವರ್‌ನಲ್ಲಿ ಮುಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ ತೆವಾತಿಯಾ ಪಂದ್ಯಕ್ಕೆ ಫಿನಿಶಿಂಗ್ ನೀಡಲು ಸಾಧ್ಯವಾಗಲಿಲ್ಲ. 31 ಎಸೆತಗಳಲ್ಲಿ 7 ಸಿಕ್ಸರ್‌ಗಳ ಸಹಿತ 53 ರನ್ ಗಳಿಸಿದ ತೆವಾತಿಯಾ ಪಂದ್ಯವನ್ನು ಸಂಪೂರ್ಣವಾಗಿ ರಾಜಸ್ಥಾನದತ್ತ ವಾಲಿಸಿದರು. ಆರ್ಚರ್ ಹಾಗೂ ಟಾಮ್ ಕರ್ರನ್ 2008ರ ಚಾಂಪಿಯನ್ ರಾಜಸ್ಥಾನ 4 ವಿಕೆಟ್‌ನಿಂದ ಜಯ ಸಾಧಿಸಲು ನೆರವಾದರು.

ರಾಹುಲ್ ತೆವಾತಿಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು. ಹರ್ಯಾಣದಲ್ಲಿ 1993ರಲ್ಲಿ ಜನಿಸಿರುವ ತೆವಾತಿಯಾ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ಸ್ಪಿನ್ ಬೌಲರ್ ಕೂಡ ಹೌದು. 2014ರಲ್ಲಿ ರಾಜಸ್ಥಾನ ಪರ ಮೊದಲ ಪಂದ್ಯ ಆಡಿದ್ದರು. ಆ ಬಳಿಕ ಪಂಜಾಬ್ ಪಾಲಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News