ಕರಣ್ ಜೋಹರ್ ವಿರುದ್ಧ ಆಪಾದನೆ ಹೊರಿಸುವಂತೆ ಬಂಧಿತ ನಿರ್ಮಾಪಕನಿಗೆ ಒತ್ತಡ: ವಕೀಲರ ಆರೋಪ

Update: 2020-09-28 11:36 GMT
ಕರಣ್ ಜೋಹರ್

ಮುಂಬೈ: ನಟ ಸುಶಾಂತ್ ಸಿಂಗ್ ರಾಜಪುತ್ ಸಾವು ಪ್ರಕರಣ ಸಂಬಂಧ ನಡೆಯುತ್ತಿರುವ ಡ್ರಗ್ಸ್ ಹಗರಣದ ತನಿಖೆಯ ಭಾಗವಾಗಿ ಕಳೆದ ವಾರ ಎನ್‍ಸಿಬಿಯಿಂದ ಬಂಧಿತರಾಗಿರುವ ನಿರ್ಮಾಪಕ ಕ್ಷಿತಿಜ್ ಪ್ರಸಾದ್ ಅವರಿಗೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದಾರೆ ಹಾಗೂ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಆರೋಪಿಸಿರುವ  ಕ್ಷಿತಿಜ್ ಅವರ ವಕೀಲ ಸತೀಶ್ ಮನೆಶಿಂಧೆ, ಚಿತ್ರ ತಯಾರಕ ಕರಣ್ ಜೋಹರ್ ಹಾಗೂ ಇತರ ಪ್ರಮುಖರ ವಿರುದ್ಧ ಆಪಾದನೆ ಹೊರಿಸುವಂತೆ ಅವರನ್ನು ಬಲವಂತಪಡಿಸಲಾಗಿದೆ ಎಂದು ದೂರಿದ್ದಾರೆ.

"ಕರಣ್ ಜೋಹರ್, ಸೋಮೆಲ್ ಮಿಶ್ರಾ, ರಾಖಿ, ಅಪೂರ್ವ, ನೀರಜ್ ಅಥವಾ ರಾಹಿಲ್ ಅವರು ಡ್ರಗ್ಸ್ ಸೇವಿಸುತ್ತಾರೆ ಎಂಬ ಆರೋಪವನ್ನು ನಾನು ಹೊರಿಸಿದರೆ ನನ್ನನ್ನು ಬಿಟ್ಟು ಬಿಡುವುದಾಗಿ ಎನ್‍ಸಿಬಿ ಅಧಿಕಾರಿಗಳು ತಿಳಿಸಿದರು,'' ಎಂದು ಕ್ಷಿತಿಜ್ ತಮಗೆ ತಿಳಿಸಿದರೆಂದು ಅವರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

"ನನಗೆ ಇವರ್ಯಾರೂ ವೈಯಕ್ತಿಕವಾಗಿ ಪರಿಚಯವಿಲ್ಲವಾದುದರಿಂದ ಒತ್ತಡಕ್ಕೆ ನಾನು ಮಣಿದಿರಲಿಲ್ಲ, ನಾನು ಯಾರ ವಿರುದ್ಧವೂ ಸುಳ್ಳು ಆರೋಪ ಹೊರಿಸಲು ಬಯಸುವುದಿಲ್ಲ,'' ಎಂದು ಕ್ಷಿತಿಜ್ ಹೇಳಿದ್ದಾರೆಂದು ಅವರ ವಕೀರು ತಿಳಿಸಿದ್ದಾರೆ.

"ತನಿಖಾಧಿಕಾರಿಯಾಗಿರುವ ಸಮೀರ್ ವಾಂಖೇಡೆ ಎಂಬವರು ಕ್ಷಿತಿಜ್‍ಗೆ ಬೆದರಿಸಿ, ಸಹಕಾರ ನೀಡದೇ ಇರುವುದರಿಂದ ನಿಮಗೆ ಪಾಠ ಕಲಿಸುತ್ತೇನೆ ಎಂದು ಹೇಳಿ ಕ್ಷಿತಿಜ್ ಅವರನ್ನು ನೆಲದ ಮೇಲೆ ಕೂರಿಸಿ ನಂತರ ಕುರ್ಚಿಯಲ್ಲಿ ಕುಳಿತಿದ್ದ ಸಮೀರ್ ತನ್ನ ಬೂಟನ್ನು ಕ್ಷಿತಿಜ್ ಮುಖದ ಸಮೀಪ ಕೊಂಡೊಯ್ದು ಇದು ನಿನ್ನ  ಘನತೆ ಎಂದರು ಹಾಗೂ ಇತರ ಅಧಿಕಾರಿಗಳು ಇದನ್ನು ನೋಡಿ ನಕ್ಕರು,'' ಎಂದೂ  ವಕೀಲರು ಆರೋಪಿಸಿದ್ದಾರೆ. ಈ ಘಟನೆಯಿಂದ ಕ್ಷಿತಿಜ್ ಮಾನಸಿಕವಾಗಿ ಜರ್ಝರಿತರಾಗಿದ್ದಾರೆ ಹಾಗೂ ಯಾರ ಜತೆಗೂ ಮಾತನಾಡಬೇಕಿದ್ದರೂ ಮೊದಲು ಸಿದ್ಧಪಡಿಸಲಾದ ಹೇಳಿಕೆಗೆ ಸಹಿ ಹಾಕಬೇಕೆಂದು ಬಲವಂತಪಡಿಸಲಾಗಿದೆ, ಕೊನೆಗೆ ಸುಮಾರು 50 ಗಂಟೆಗಳ ವಿಚಾರಣೆ ನಂತರ ಉಪಾಯವಿಲ್ಲದೆ ಅನಿವಾರ್ಯವಾಗಿ ಕ್ಷಿತಿಜ್ ಹೇಳಿಕೆಗೆ ಸಹಿ ಹಾಕಿದರು ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕ್ಷಿತಿಜ್ ಅವರಿಗೆ ತಮ್ಮ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ಜತೆ ಯಾವುದೇ ಸಂಬಂಧವಿಲ್ಲವೆಂದು ಕರಣ್ ಜೋಹರ್ ಈಗಾಗಲೇ ಸ್ಪಷ್ಟನೆ ನೀಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News