ಕಾನೂನುಬಾಹಿರ ಚಟುವಟಿಕೆಗಳಿಂದ ಗಮನ ಬೇರೆಡೆ ಸೆಳೆಯುವ ಯತ್ನ: ಆ್ಯಮ್ನೆಸ್ಟಿ ಆರೋಪದ ಬಗ್ಗೆ ಕೇಂದ್ರ

Update: 2020-09-29 16:57 GMT

ಹೊಸದಿಲ್ಲಿ, ಸೆ. 29: ಭಾರತದಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಟಿಸಿದ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಶ್ನಿಸಿದ ಇತ್ತೀಚೆಗಿನ ವರದಿ ಕುರಿತಂತೆ ತನ್ನನ್ನು ಗುರಿ ಮಾಡಲಾಗಿದೆ ಎಂದು ಆರೋಪಿಸಿದ ಗಂಟೆಗಳ ಬಳಿಕ ಕೇಂದ್ರ ಸರಕಾರ, ‘‘ನೆಲದ ಕಾನೂನನ್ನು ಉಲ್ಲಂಘಿಸಲು ಮಾನವ ಹಕ್ಕು ನೆಪವಾಗಬಾರದು’’ ಎಂದಿದೆ. ‘‘ಮಾನವೀಯತೆಯ ಕಾರ್ಯದ ಕುರಿತ ಥಳುಕಿನ ಹೇಳಿಕೆಗಳು ತಮ್ಮ ಕಾನೂನು ಬಾಹಿರ ಚಟುವಟಿಕೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ’’ ಎಂದು ಕೇಂದ್ರ ಪ್ರತಿಕ್ರಿಯಿಸಿದೆ.

  ‘‘ಮಾನವೀಯತೆಯ ಕಾರ್ಯ ಹಾಗೂ ಅಧಿಕಾರಯುತವಾಗಿ ಸತ್ಯ ನುಡಿಯುತ್ತಿರುವ ಕುರಿತ ಅದರ ಥಳುಕಿನ ಹೇಳಿಕೆಗಳು ಭಾರತದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿರುವ ತಮ್ಮ ಚಟುವಟಿಕೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ. ಇಂತಹ ಹೇಳಿಕೆಗಳು ಕಳೆದ ಕೆಲವು ವರ್ಷಗಳಿಂದ ಭ್ರಷ್ಟಾಚಾರ ಹಾಗೂ ಅಕ್ರಮಗಳ ಬಗ್ಗೆ ಹಲವು ಸಂಸ್ಥೆಗಳು ನಡೆಸುತ್ತಿರುವ ತನಿಖೆ ಮೇಲೆ ಬಾಹ್ಯ ಪ್ರಭಾವ ಬೀರುವ ಪ್ರಯತ್ನ’’ ಎಂದು ಕೇಂದ್ರ ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  ‘‘ಇತರ ಹಲವು ಸಂಘಟನೆಗಳಂತೆ ಆ್ಯಮ್ನೆಸ್ಟಿ ಭಾರತದಲ್ಲಿ ಮಾನವೀಯ ಕಾರ್ಯಗಳನ್ನು ಮುಂದುವರಿಸಲು ಮುಕ್ತ. ಆದರೆ, ಭಾರತದಲ್ಲಿರುವ ಕಾನೂನು ವಿದೇಶಗಳಿಂದ ದೇಣಿಗೆ ಪಡೆಯುವ ಸಂಸ್ಥೆಗಳು ದೇಶದ ರಾಜಕೀಯ ಚರ್ಚೆಯಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡುವುದಿಲ್ಲ. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್‌ಗೆ ಕೂಡ ಅನ್ವಯವಾಗುತ್ತದೆ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News