ಶೀಘ್ರದಲ್ಲೇ ಬರಲಿದೆ ಕ್ರೀಡಾಪಟುಗಳಿಗೆ ಬ್ಯಾಟರಿ ಚಾಲಿತ ಮಾಸ್ಕ್

Update: 2020-09-30 11:35 GMT

ಹೊಸದಿಲ್ಲಿ: ಕ್ರೀಡಾಪಟುಗಳಿಗೆ ತರಬೇತಿ ಸಮಯದಲ್ಲಿ ಕೊರೋನ ವೈರಸ್ ಸೋಂಕಿನಿಂದ ಪಾರಾಗಲು ಖರಗ್‌ಪುರ ಐಐಟಿಯ ಹಳೆ ವಿದ್ಯಾರ್ಥಿಯೊಬ್ಬರು ಬ್ಯಾಟರಿಚಾಲಿತ ಮಾಸ್ಕ್ ತಯಾರಿಸಿದ್ದಾರೆ.

ಈ ಮಾಸ್ಕ್ ಧರಿಸುವುದರಿಂದ ಕ್ರೀಡಾಪಟುಗಳಿಗೆ ತರಬೇತಿ ಸಮಯದಲ್ಲಿ ಅಮ್ಲಜನಕ ದೊರೆಯಲಿದೆ. ಒಲಿಂಪಿಕ್‌ಗೆ ಆಯ್ಕೆಯಾಗಿರುವ ಭಾರತದ ಕ್ರೀಡಾಪಟುಗಳಿಗೆ ಐಒಎ ಒದಗಿಸಲಿದೆ.

ಈ ಸಂಬಂಧ ಭಾರತದ ಒಲಿಂಪಿಕ್ ಸಂಘಟನೆಯು ಐಐಟಿ ಖರಗ್‌ಪುರದ ಹಳೆ ವಿದ್ಯಾರ್ಥಿ ಪಿಯುಷ್ ಅಗರ್ವಾಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರ ಪಿಕ್ಯೂಆರ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕ್ರೀಡಾಪಟುಗಳಿಗೆ ಮಾಸ್ಕ್‌ನ್ನು ಪೂರೈಕೆ ಮಾಡಲಿದೆ.

‘ಕವಾಚ್ ಮಾಸ್ಕ್ ಪ್ರಾಜೆಕ್ಟ್’ ಯೋಜನೆಯಲ್ಲಿ ಸರಕಾರ ಮಾಸ್ಕ್ ತಯಾರಿಕೆಗೆ ನೆರವು ನೀಡಲಿದೆ. ಅಗರ್ವಾಲ್ ಕಳೆದ ಎರಡು ವರ್ಷಗಳಿಂದ ಮಾಸ್ಕ್ ಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೊದಲು ಮಾಲಿನ್ಯದ ಸಮಸ್ಯೆಯಿಂದ ಪಾರಾಗಲು ಉಪಯುಕ್ತವಾದ ಮಾಸ್ಕ್ ತಯಾರಿಸಿದ್ದರು. ಬ್ಯಾಟರಿ ಚಾಲಿತ ಮಾಸ್ಕ್‌ನ ಹೆಸರು ‘ಮೋಕ್ಷ’. ಇದರ ಬೆಲೆ 2,200 ರೂ. ಕ್ರೀಡಾಪಟುಗಳು ಇದನ್ನು ಧರಿಸಿ ತರಬೇತಿ ಪಡೆಯುವ ವೇಳೆ ಉಸಿರಾಟದ ಸಮಸ್ಯೆ ಕಂಡು ಬರದಿರುವುದು ಖಚಿತವಾದರೆ ಐಒಎ ವೈದ್ಯಕೀಯ ಆಯೋಗದ ಅನುಮೋದನೆ ಪಡೆದು ಅವುಗಳನ್ನು ಎಲ್ಲಾ ಒಲಿಂಪಿಕ್-ಬೌಂಡ್ ಕ್ರೀಡಾಪಟುಗಳು ಮತ್ತು ಇತರ ಅಥ್ಲೀಟ್‌ಗಳಿಗೆ ಬಳಸಲು ಅವಕಾಶ ನೀಡಲಾಗುವುದು ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ನಾವು ಆರಂಭದಲ್ಲಿ 1,000 ಮಾಸ್ಕ್‌ಗಳ ಪೂರೈಕೆಗೆ ಆದೇಶ ನೀಡಿದ್ದೇವೆ. ಮೊದಲು 10-15 ಕ್ರೀಡಾಪಟುಗಳು ಬ್ಯಾಟರಿಚಾಲಿತ ಮಾಸ್ಕ್ ಧರಿಸಿ ತರಬೇತಿ ಪಡೆಯಲಿದ್ದಾರೆ ಎಂದು ಮೆಹ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News