ದೇಶದಲ್ಲಿ ಪ್ರತಿ ದಿನ ಎಷ್ಟು ಅತ್ಯಾಚಾರಗಳು ನಡೆಯುತ್ತಿದೆ ಗೊತ್ತೇ ?

Update: 2020-09-30 05:44 GMT

ಹೊಸದಿಲ್ಲಿ : ದೇಶದಲ್ಲಿ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಹಿಳೆಯರ ವಿರುದ್ಧದ ಅಪರಾಧಗಳು ಶೇಕಡ 7ರಷ್ಟು ಹೆಚ್ಚಿವೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಭಾರತದಲ್ಲಿ 2019ರಲ್ಲಿ ಪ್ರತಿ ದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ವರ್ಷ ದೇಶದಲ್ಲಿ ಮಹಿಳೆಯರ ವಿರುದ್ಧ 4,05,861 ಅಪರಾಧಗಳು ನಡೆದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 7ರಷ್ಟು ಅಧಿಕ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಹೇಳಿದೆ.

"ಕ್ರೈಮ್ಸ್ ಇನ್ ಇಂಡಿಯಾ-2019" ವರದಿಯ ಪ್ರಕಾರ ಮಹಿಳೆಯರ ಮೇಲಿನ ಅಪರಾಧಗಳು ಶೇಕಡ 7.3ರಷ್ಟು ಹೆಚ್ಚಿವೆ. ಪ್ರತಿ ಲಕ್ಷ ಮಹಿಳಾ ಜನಸಂಖ್ಯೆಗೆ ಅಪರಾಧ ದರ 62.4 ಶೇಕಡ ಇದ್ದರೆ, ಹಿಂದಿನ ವರ್ಷ ಇದು 58.8 ಶೇಕಡ ಇತ್ತು. 2018ರಲ್ಲಿ ದೇಶದಲ್ಲಿ ಮಹಿಳೆಯರ ವಿರುದ್ಧ 3,78,236 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದವು. 2018ರಲ್ಲಿ 33,356 ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, 2017ರಲ್ಲಿ 32,559 ಪ್ರಕರಣಗಳು ವರದಿಯಾಗಿದ್ದವು.

ಈ ಪೈಕಿ ಬಹುತೇಕ ಪ್ರಕರಣಗಳು ಭಾರತೀಯ ದಂಡಸಂಹಿತೆಯಡಿ ದಾಖಲಾಗಿದ್ದು, ಪತಿ ಹಾಗೂ ಸಂಬಂಧಿಕರ ಕಿರುಕುಳ (ಶೇಕಡ 30.9) ಅತ್ಯಧಿಕ. ಮಹಿಳೆಯರ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಶೇಕಡ 21.8ರಷ್ಟಿದ್ದರೆ, ಮಹಿಳೆಯರ ಅಪಹರಣ ಪ್ರಕರಣಗಳು ಶೇಕಡ 17.9ರಷ್ಟಿವೆ ಎಂದು ಅಂಕಿ ಅಂಶಗಳು ಹೇಳಿವೆ.

ಮಕ್ಕಳ ವಿರುದ್ಧದ ಅಪರಾಧಗಳು ಹೆಚ್ಚಿರುವುದನ್ನು ಕೂಡಾ ಎನ್‌ಸಿಆರ್‌ಬಿ ದಾಖಲೆಗಳು ಹೇಳುತ್ತವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2019ರಲ್ಲಿ ಮಕ್ಕಳ ಮೇಲಿನ ಅಪರಾಧಗಳು ಶೇಕಡ 4.5ರಷ್ಟು ಹೆಚ್ಚಿವೆ. 2019ರಲ್ಲಿ ಮಕ್ಕಳ ವಿರುದ್ಧದ ದೌರ್ಜನ್ಯದ 1.48 ಲಕ್ಷ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News