ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಬ್ಯಾಂಕ್ ಖಾತೆ ಸ್ಥಂಭನ: ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧಾರ

Update: 2020-09-30 17:48 GMT

ಹೊಸದಿಲ್ಲಿ, ಸೆ.30: ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಂಭನಗೊಳಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಹೇಳಿದೆ. ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ವಿದೇಶಿ ದೇಣಿಗೆ ನಿಯಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸ್ಥಂಭನ ಮಾಡಲಾಗಿದೆ. ಇದು ಸೇಡಿನ ಕ್ರಮವಾಗಿದೆ. ಭಾರತದ ಅಧಿಕಾರಿಗಳು ನಿರಂತರ ದ್ವೇಷ ಸಾಧಿಸುತ್ತಿದ್ದು ಈ ನಿರ್ಧಾರದಿಂದ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಳಿಸುವ ಅನಿವಾರ್ಯತೆಯಿದ್ದು ಸುಮಾರು 150 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಹೇಳಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಕೆಲವು ತಿಂಗಳು ನಡೆಯಬಹುದು. ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಿರುವ ನಿರ್ಬಂಧ ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆಯ ಸ್ವರೂಪದ ಹಿನ್ನೆಲೆಯಲ್ಲಿ, ನ್ಯಾಯಾಂಗ ಪ್ರಕ್ರಿಯೆ ಕೊನೆಗೊಳ್ಳುವ ಅವಧಿಯ ಬಗ್ಗೆ ಊಹಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.

ಆದರೆ ಆ್ಯಮ್ನೆಸ್ಟಿಯ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಮತ್ತು ತಾನು ನಡೆಸುತ್ತಿರುವ ಭಾರತದ ಕಾನೂನಿಗೆ ವಿರುದ್ಧವಾದ ಚಟುವಟಿಕೆಯಿಂದ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ಕೇಂದ್ರ ಸರಕಾರ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News