ಇದು ಅಪಾಯಕಾರಿ ಬೆಳವಣಿಗೆ

Update: 2020-09-30 19:30 GMT

‘‘ಅಲ್ಪಸಂಖ್ಯಾತ ಸಮುದಾಯಗಳ ಘನತೆ, ಪತ್ರಿಕಾ ಸ್ವಾತಂತ್ರ್ಯದಷ್ಟೇ ಪ್ರಮುಖವಾದ ಸಂಗತಿ ಎಂಬುದನ್ನು ವರ್ತಮಾನದ ಮಾಧ್ಯಮಲೋಕ ಅರ್ಥಮಾಡಿಕೊಳ್ಳಬೇಕು.’’ ದೃಶ್ಯ ಮಾಧ್ಯಮಗಳ ಕೆಲವು ಕಾರ್ಯಕ್ರಮಗಳು ಅಲ್ಪಸಂಖ್ಯಾತ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುತ್ತಿವೆ, ಅವುಗಳನ್ನು ನಿಷೇಧಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲಿನ ಚರ್ಚೆಯಲ್ಲಿ ಭಾರತದ ಸುಪ್ರಿಂಕೋರ್ಟ್ ಮೇಲಿನ ಮಹತ್ವದ ಹೇಳಿಕೆಯನ್ನು ದಾಖಲಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಲ್ಲಿ ಒಬ್ಬರಾದ ಜಸ್ಟೀಸ್ ಚಂದ್ರಚೂಡ್ ಅವರು ‘‘ನಮಗೆ ಒಗ್ಗಟ್ಟನ್ನು ಪ್ರತಿಪಾದಿಸುವ ಧ್ವನಿ ಮುಖ್ಯ, ಭಾರತದ ಪ್ರಜೆ ಮತ್ತು ನ್ಯಾಯಾಧೀಶರಾಗಿ ದೇಶದ ಭದ್ರತೆಯ ಕುರಿತು ನಮಗೆ ಎಷ್ಟು ಕಾಳಜಿ ಇದೆಯೋ, ಅಷ್ಟೇ ಕಾಳಜಿ ಮಾನವ ಘನತೆಯನ್ನು ರಕ್ಷಿಸುವ ಕುರಿತೂ ಇದೆ, ನ್ಯಾಯಾಲಯಕ್ಕೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಏನಾಯಿತು ಎನ್ನುವುದರ ಅರಿವಿದೆ.

ಒಂದು ವ್ಯವಸ್ಥೆಯಲ್ಲಿ ಅಭಿಪ್ರಾಯಗಳ ಮುಕ್ತ ಅಭಿವ್ಯಕ್ತಿಗೆ ಅವಕಾಶ ಇರಬೇಕು ಎನ್ನುವುದು ಎಷ್ಟು ಮುಖ್ಯವೋ, ಆದರ ಜೊತೆಯಲ್ಲಿಯೇ ಸಮುದಾಯಗಳ ಘನತೆಯನ್ನು ರಕ್ಷಿಸುವುದೂ ಅಷ್ಟೇ ಮುಖ್ಯ ಎಂದು ನ್ಯಾಯಾಲಯ ಭಾವಿಸುತ್ತದೆ’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಜಸ್ಟೀಸ್ ಕೆ.ಎಂ. ಜೋಸೆಫ್ ಅವರು ‘‘ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮುಖ್ಯವಾಹಿನಿಗೆ ಬರಲು ಯತ್ನಿಸುತ್ತಿರುವ ಸಮುದಾಯಗಳನ್ನು ಅಂಚಿಗೆ ತಳ್ಳುತ್ತವೆ, ಈ ಪ್ರಯತ್ನ ಆ ಗುಂಪುಗಳನ್ನು ಅಂತಿಮವಾಗಿ ರೋಗಗ್ರಸ್ತ ಚಿಂತನೆ ಹೊಂದಿರುವವರ ಕಡೆಗೆ ತಲುಪಿಸುತ್ತದೆ. ಈ ದೇಶದ ಪ್ರತಿಯೊಂದು ಸಮುದಾಯವೂ ಆಡಳಿತದಲ್ಲಿ ತನ್ನ ಧ್ವನಿಯನ್ನು/ಅವಕಾಶವನ್ನು ಹೊಂದುವ ಅಧಿಕಾರ ಹೊಂದಿದೆ. ಆದರಲ್ಲಿ ತಪ್ಪೇನಿದೆ?’’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ದೃಶ್ಯಮಾಧ್ಯಮವೊಂದು ಆಯೋಜಿಸಿದ್ದ ‘ಯುಪಿಎಸ್‌ಸಿ ಜಿಹಾದ್’ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ನಿಷೇಧಿಸುವ ಬಗ್ಗೆ ಸಲ್ಲಿಸಲಾಗಿದ್ದ ಮೊಕದ್ದಮೆಯ ಕುರಿತು ನಡೆದ ವಿಚಾರಣೆಯ ಸಂದರ್ಭದಲ್ಲಿ ಚರ್ಚಿತವಾದ ಎಲ್ಲಾ ಸಂಗತಿಗಳೂ ಭಾರತ ಸಂವಿಧಾನದ ಮೂಲ ಆಶಯವನ್ನು ಧ್ವನಿಸುತ್ತವೆ ಮತ್ತು ವರ್ತಮಾನದ ಮಾಧ್ಯಮಲೋಕಕ್ಕೆ ಮೂಲಭೂತ ಸಾಂವಿಧಾನಿಕ ಪಾಠವನ್ನು ಬೋಧಿಸಿದೆ ಅನ್ನಿಸುತ್ತಿದೆ. ನಮ್ಮ ಕಾಲದಲ್ಲಿ ಧಾರ್ಮಿಕ ಗುಂಪುಗಳ ಕುರಿತು ವ್ಯವಸ್ಥಿತವಾಗಿ ಹರಡಲಾಗುತ್ತಿರುವ ಸುಳ್ಳುಗಳು ಕೇವಲ ಕೆಲವರ ಪೂರ್ವಾಗ್ರಹದಿಂದ ಹುಟ್ಟಿದ ರೋಗಗ್ರಸ್ತ ಚಿಂತನೆಗಳು, ಶಿಕ್ಷಣದ ಮೂಲಕ ಅವುಗಳನ್ನು ಸರಿಪಡಿಸಬಹುದು ಎನ್ನುವ ನಿರೂಪಣೆಗಳು ಅರ್ಥಕಳೆದುಕೊಳ್ಳುತ್ತಿವೆ. ಏಕೆಂದರೆ ಕೆಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗುತ್ತಿರುವ ಸಮಾಜ-ವಿಘಟನೆಯ ಚಿಂತನೆಗಳು ಕೇವಲ ಕೆಲವರ ಪೂರ್ವಾಗ್ರಹ ಮಾತ್ರವಲ್ಲ, ಬದಲಾಗಿ ಅದೊಂದು ‘ಸಮುದಾಯ ದ್ವೇಷವನ್ನು ಉತ್ಪಾದಿಸುವ ವ್ಯವಸ್ಥಿತ ಉದ್ಯಮ’ ಎನ್ನುವುದನ್ನು ಹಲವು ಶೋಧನೆಗಳು ದೃಢೀಕರಿಸುತ್ತಿವೆ ಮತ್ತು ಇದನ್ನು ನಿರ್ವಹಿಸುತ್ತಿರುವುದು ಶಿಕ್ಷಿತ ಸಮುದಾಯ ಎನ್ನುವ ವಿವರಗಳು ಆತಂಕವನ್ನು ಇನ್ನೂ ಹೆಚ್ಚಿಸುತ್ತಿವೆ.

ಕೊರೋನದಂತಹ ಸಾಂಕ್ರಾಮಿಕ ರೋಗ ಸೇರಿದಂತೆ ಹಲವು ಕಾರಣಗಳಿಂದಾಗಿ ಇಂದು ದೇಶದ ದುಡಿಯುವ ವರ್ಗ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ದಿನಗೂಲಿ ನೌಕರರ ಆತ್ಮಹತ್ಯೆಗಳು ದುಪ್ಪಟ್ಟಾಗಿವೆ. ಕಳೆದ ವರ್ಷ ಅಂದರೆ 2019ರಲ್ಲಿ ದಾಖಲಾದ ಒಟ್ಟು ಆತ್ಮಹತ್ಯೆಗಳಲ್ಲಿ ಶೇ. 22.4 ಆತ್ಮಹತ್ಯೆ ಪ್ರಕರಣಗಳು ದಿನಗೂಲಿ ನೌಕರರದ್ದಾಗಿವೆ. ಕಳೆದ ಒಂದು ವರ್ಷದಲ್ಲಿಯೇ 29,092 ಜನ ದಿನಗೂಲಿ ಪುರುಷರು ಮತ್ತು 3,467 ದಿನಗೂಲಿ ಮಹಿಳೆಯರು ಮತ್ತು 4 ಜನ ತೃತೀಯ ಲಿಂಗಿ ದಿನಗೂಲಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಕಳೆದ ವರ್ಷ ಶೇ. 10.1ರಷ್ಟಿದೆ, ಕಳೆದ 25 ವರ್ಷಗಳಲ್ಲಿ ಮೊದಲ ಬಾರಿಗೆ ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಎರಡಂಕಿ ದಾಟಿದೆ ಎನ್ನುವ ಆಘಾತಕಾರಿ ಅಂಕಿ-ಅಂಶಗಳನ್ನು ಅಪರಾಧ ದಾಖಲೆ ಘಟಕ(ಘೆಇ್ಕಆ)ದೇಶದ ಮುಂದಿಟ್ಟಿದೆ. ರೈತರ ಆತ್ಮಹತ್ಯೆಗಳ ಸುದ್ದಿ ಕೇಳಿಯೇ ನಲುಗುತ್ತಿದ್ದ ದೇಶವೊಂದು ದಿನಗೂಲಿ ಮತ್ತು ನಿರುದ್ಯೋಗಿಗಳ ಆತ್ಮಹತ್ಯೆಯ ಸುದ್ದಿಯನ್ನು ಕೇಳುವುದು ಯಾವ ಅರ್ಥದಲ್ಲಿಯೂ ಒಳ್ಳೆಯ ಬೆಳವಣಿಗೆಯಲ್ಲ.

ಆದರೆ ನಮ್ಮ ಬಹುತೇಕ ಪತ್ರಿಕಾ ಮಾಧ್ಯಮಗಳು ಈ ಕುರಿತ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುವುದಿಲ್ಲ, ಈ ಸಂಗತಿಗಳು ಯಾವ ದೃಶ್ಯಮಾಧ್ಯಮಗಳ ಪ್ರೈಮ್‌ಟೈಮ್ ಚರ್ಚೆಯ ಭಾಗವೂ ಆಗುವುದಿಲ್ಲ. ಇದರ ಅರ್ಥ ಇಂದು ದೇಶದ ನೈಜ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಕಾರ್ಮಿಕರ ವಲಸೆ, ಲಿಂಗತಾರತಮ್ಯ ಇತ್ಯಾದಿ ಸಂಗತಿಗಳನ್ನು ವ್ಯವಸ್ಥಿತವಾಗಿ ಮುಚ್ಚಿಟ್ಟು, ಅವುಗಳ ಜಾಗದಲ್ಲಿ ಸಮುದಾಯ ದ್ವೇಷದ ಕುರಿತ ಅಭಿಪ್ರಾಯ ಉತ್ಪಾದಿಸಿ ಯುವತಲೆಮಾರನ್ನು ಆ ಕುರಿತ ಅನಗತ್ಯ ಚರ್ಚೆಯಲ್ಲಿ ನಿರತರಾಗಿಸುವ ವ್ಯವಸ್ಥಿತ ಜಾಲವೊಂದು ನಮ್ಮ ನಡುವೆ ಬೆಳೆದು ನಿಂತಿದೆ.

ದೇಶದಲ್ಲಿ ಜಾರಿಯಾದ ನವ ಉದಾರವಾದಿ ಆರ್ಥಿಕ ನೀತಿಗಳ ಕಾರಣಕ್ಕಾಗಿ ಇಂದು ಬಹುತೇಕ ಶೋಷಕ ವ್ಯವಸ್ಥೆಯ ಪಾಲುದಾರನೇ ಆಗಿಹೋಗಿರುವ ಆಧುನಿಕ ಮಾಧ್ಯಮಗಳು ಮುಂದಿಡುವ ಸಮಾಜದ ಕುರಿತ ಈ ಸಂಕುಚಿತ ಕಣ್ಣೋಟ ನಮ್ಮ ಯುವತಲೆಮಾರನ್ನು ನಮ್ಮ ದೇಶ ವೈವಿಧ್ಯದಿಂದ ಕೂಡಿದ ಸುಂದರ ಸಮಾಜ ಎಂಬ ವಾಸ್ತವ ಸಂಗತಿಯನ್ನು ಗ್ರಹಿಸಲಾರದ ಸ್ಥಿತಿಗೆ ತಳ್ಳಿ ಜಾತಿ, ಲಿಂಗ ಮತ್ತು ಧರ್ಮದ ಕುರಿತು ಒಂದಲ್ಲ ಒಂದು ರೀತಿಯ ಪೂರ್ವಾಗ್ರಹವನ್ನು ಅವರಲ್ಲಿ ಉತ್ಪಾದಿಸುತ್ತಿದೆ.

ದೇಶದ ಭವಿಷ್ಯದ ದೃಷ್ಟಿಯಿಂದ ಈ ಬೆಳವಣಿಗೆಗಳು ನಿಜಕ್ಕೂ ಅಪಾಯಕಾರಿ. ಮಾನ್ಯ ಘನ-ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಈ ಅಂಶಗಳನ್ನೇ ಸೂಚಿಸುತ್ತಿದೆ ಅನ್ನಿಸುತ್ತಿದೆ. ಆದರೆ ದೇಶದ ಭವಿತವ್ಯದ ಕುರಿತು ತೀರ್ಮಾನ ಕೈಗೊಳ್ಳುವ, ನೀತಿ ನಿರೂಪಿಸುವ ಪ್ರಕ್ರಿಯೆಯ ಪಾಲುದಾರರಾದ ರಾಜಕೀಯ ಪಕ್ಷಗಳು, ಶಾಸನಸಭೆಗಳು, ನೌಕರಶಾಹಿ ವ್ಯವಸ್ಥೆ, ಮಾಧ್ಯಮಗಳು ಮತ್ತು ನಾಗರಿಕ ಸಮುದಾಯಗಳು ಎಚ್ಚರಗೊಳ್ಳಬೇಕಿದೆ.

Writer - ಡಾ. ಕಿರಣ್ ಎಂ., ಗಾಜನೂರು

contributor

Editor - ಡಾ. ಕಿರಣ್ ಎಂ., ಗಾಜನೂರು

contributor

Similar News