×
Ad

ಮಾಹಿತಿ ನೀಡದೆ ಕಾರ್ಗಿಲ್ ಯುದ್ಧ ಆರಂಭಿಸಿದ್ದರೆ ಸೇನಾ ವರಿಷ್ಠನನ್ನು ಉಚ್ಚಾಟಿಸುತ್ತಿದ್ದೆ: ಇಮ್ರಾನ್ ಖಾನ್

Update: 2020-10-02 23:08 IST

 ಇಸ್ಲಾಮಾಬಾದ್, ಅ.2: ಒಂದು ವೇಳೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತಾನು ಪ್ರಧಾನಿಯಾಗಿದ್ದಲ್ಲಿ, ತನಗೆ ಮಾಹಿತಿ ನೀಡದೆ ಯುದ್ಧವನ್ನು ಆರಂಭಿಸಿದ್ದರೆ, ತಾನು ಕೂಡಲೇ ಸೇನಾ ವರಿಷ್ಠನನ್ನು ಕಿತ್ತೊಗೆಯುತ್ತಿದ್ದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

 1999ರಲ್ಲಿ ನಡೆದ ಭಾರತದ ಜೊತೆಗೆ ಕಾರ್ಗಿಲ್ ಯುದ್ಧ ಆರಂಭಗೊಂಡಾಗ ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲವೆಂದು ಪದಚ್ಯುತ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರ ಹೇಳಿಕೆಗೆ ಇಮ್ರಾನ್ ಖಾನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿ ಸಾಮಾ ಟಿವಿಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್‌ಖಾನ್ ‘‘ ಒಂದು ವೇಳೆ ಆಗ ನಾನು ಪ್ರಧಾನಿಯಾಗಿದ್ದಲ್ಲಿ ನನಗೆ ಮಾಹಿತಿ ನೀಡದೆ ಕಾರ್ಗಿಲ್ ಯುದ್ಧವನ್ನು ಆರಂಭಿಸಿರುತ್ತಿದ್ದರೆ, ನಾನು ತಕ್ಷಣವೇ ಸೇನಾ ವರಿಷ್ಠನನ್ನು ಉಚ್ಛಾಟಿಸುತ್ತಿದ್ದೆ’’  ಒಂದು ವೇಳೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ನನಗೆ ಐಎಸ್‌ಐ ವರಿಷ್ಠ ಹೇಳಿರುತ್ತಿದ್ದಲ್ಲಿ ಅವರನ್ನು ಕೂಡಾ ಕಿತ್ತೆಸೆಯುತ್ತಿದ್ದೆ ಎಂದರು.

 2014ರಲ್ಲಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದ ಸಂದರ್ಭ ದಲ್ಲಿ, ತಾನು ರಾಜೀನಾಮೆ ನೀಡುವಂತೆ ಆಗಿನ ಐಎಸ್‌ಐ ವರಿಷ್ಠ ನನ್ನನ್ನು ಕೇಳಿ ಕೊಂಡಿದ್ದರೆಂದು ಆಗ ಪ್ರಧಾನಿಯಾಗಿದ್ದ ನವಾಝ್ ಶರೀಫ್ ಇತ್ತೀಚೆಗೆ ಬಹಿರಂಗಪಡಿಸಿದ್ದರ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಪಾಕ್ ಸೇನೆಯ ವಿರುದ್ಧ ಗುರಿಯಿಡುತ್ತಿರುವುದಕ್ಕಾಗಿ ನವಾಝ್ ಶರೀಫ್‌ರನ್ನು ಖಂಡಿಸಿದ ಇಮ್ರಾನ್ ಖಾನ್ ಅವರು, ಸೇನೆಯು ದೇಶವನ್ನು ಐಕ್ಯದಿಂದಿರಿಸಿದೆ ಎಂದರು. ಒಂದು ವೇಳೆ ಸೇನೆಯಿಲ್ಲದೆ ಇರುತ್ತಿದ್ದರೆ ಪಾಕಿಸ್ತಾನವು ಮೂರು ಹೋಳುಗಳಾಗುತ್ತಿತ್ತು ಎಂದು ಇಮ್ರಾನ್ ನುಡಿದರು.

 ವೈದ್ಯಕೀಯ ಚಿಕಿತ್ಸೆಯ ಕಾರಣ ನೀಡಿ 2019ರ ನವೆಂಬರ್‌ನಿಂದ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಝ್ ಶರೀಫ್ ಅವರು ಇತ್ತೀಚೆಗೆ ವಿಡಿಯೋಕಾನ್ಫರೆನ್ಸ್ ಮೂಲಕ ಮಾಡಿದ ಭಾಷಣಗಳಲ್ಲಿ ಪಾಕ್ ರಾಜಕೀಯದಲ್ಲಿ ಸೇನೆಯು ಹಸ್ತಕ್ಷೇಪ ನಡೆಸುತ್ತಿದೆಯೆಂದು ಆರೋಪಿಸಿದ್ದರು. ಸೇನೆಯ ಬೆಂಬಲದಿಂದಲೇ ಇಮ್ರಾನ್ ಖಾನ್ ಅಧಿಕಾರಕ್ಕೇರಿದ್ದಾರೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News