ಅಝರ್ಬೈಜಾನ್ ಪಡೆಗಳಿಂದ ಸ್ಟೆಪೆನಾಕಾರ್ಟ್ ನಗರದ ಮೇಲೆ ಭೀಕರ ದಾಳಿ: ಭಾರೀ ಸಾವುನೋವು?

Update: 2020-10-02 17:48 GMT

ಯೆರೆವಾನ್ (ಆರ್ಮೇನಿಯ),ಅ.2: ಆರ್ಮೇನಿಯ ಹಾಗೂ ಅಝರ್‌ಬೈಝನ್ ಸೇನಾಪಡೆಗಳ ನಡುವೆ ನಡೆಯುತ್ತಿರುವ ಕಾಳಗವು ಶುಕ್ರವಾರ 6 ನೇ ದಿನಕ್ಕೆ ಕಾಲಿರಿಸಿದ್ದು, ಅಝರ್‌ಬೈಝಾನಿ ಪಡೆಗಳು ನಾಗೊರ್ನಿ ಕರ್ಬಾಖ್ ಪ್ರಾಂತದ ಮುಖ್ಯ ನಗರವಾದ ಸ್ಟೆಪೆನಾಕಾರ್ಟ್ ನಗರದ ಮೇಲೆ ದಾಳಿ ನಡೆಸಿ, ಹಲವಾರು ಮಂದಿ ನಾಗರಿಕರನ್ನು ಗಾಯಗೊಳಿಸಿವೆ. ನಾಗೊರ್ನಿ ಕರ್ಬಾಖ್, ಆಝರ್‌ಬೈಝಾನ್‌ನಿಂದ ಸಿಡಿದುಹೋದ ಪ್ರಾಂತವಾಗಿದ್ದು, ಅದರ ಮೇಲೆ ಹಿಡಿತ ಸಾಧಿಸಲು ಉಭಯ ದೇಶಗಳು ಕೆಲವು ದಶಕಗಳಿಂದ ಸಂಘರ್ಷ ದಲ್ಲಿ ತೊಡಗಿವೆ. ಆದಾಗ್ಯೂ ಕಳೆದ ರವಿವಾರದಿಂದ ಭುಗಿಲೆದ್ದಿರುವ ಘರ್ಷಣೆಯು ದಶಕಗಳಲ್ಲೇ ಅತ್ಯಂತ ಭೀಕರವಾದುದೆನ್ನಲಾಗಿದೆ.

  ಆಝಾರ್‌ಬೈಝಾನ್ ಪಡೆಗಳ ದಾಳಿಯಲ್ಲಿ ಸ್ಟೆಪೆನಾಕಾರ್ಟ್ ಪಟ್ಟಣದ ಹಲವು ನಾಗರಿಕರು ಗಾಯಗೊಂಡಿದ್ದು, ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಆರ್ಟ್ಸ್‌ರನ್ ಹೊವಾಹ್‌ನಿಸ್ಯಾನ್ ಫೇಸ್‌ಬುಕ್‌ನಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ನಗರದಲ್ಲಿ ಶುಕ್ರವಾರ ಭಾರೀ ಸ್ಫೋಟದ ಸದ್ದುಗಳು ಕೇಳಿಬಂದಿದ್ದು ರಕ್ಷಣಾಪಡೆಗಳ ಸೈರನ್‌ಗಳು ಮೊಳಗುತ್ತಿದ್ದುದು ಕೇಳಿಬರುತ್ತಿತ್ತೆಂದು ಸ್ಟೆಪೆನಾಕಾರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಎಫ್‌ಪಿ ಸುದ್ದಿಸಂಸ್ಥೆಯ ಪತ್ರಕರ್ತರು ತಿಳಿಸಿದ್ದಾರೆ.

ಈ ಮಧ್ಯೆ ಅಝರ್‌ಬೈಜಾನಿ ಪಡೆಗಳು ಆರ್ಮೇನಿಯ ಹಾಗೂ ಕರ್ಬಾಖ್ ಪ್ರಾಂತವನ್ನು ಸಂಪರ್ಕಿಸುವ ಸೇತುವೆಯೊಂದನ್ನು ನಾಶಪಡಿಸಿರುವುದಾಗಿ ಸ್ಟೆಪೆನಾಕಾರ್ಟ್‌ನ ಪ್ರತ್ಯೇಕತಾವಾದಿ ಸರಕಾರವು ತಿಳಿಸಿದೆ.

 ಹೊಸದಾಗಿ ಸಂಘರ್ಷ ಭುಗಿಲೆದ್ದಿರುವುದಕ್ಕೆ ಉಭಯ ದೇಶಗಳೂ ಪರಸ್ಪರರನ್ನು ದೂಷಿಸಿದ್ದು, ಯಾವುದೇ ಸಂಭಾವ್ಯ ಶಾಂತಿ ಮಾತುಕತೆಗಳನ್ನು ನಡೆಸಲು ನಿರಾಕರಿಸಿವೆ.

ನಗೋರ್ನಾ ಕರ್ಬಾಖ್ ಪ್ರಾಂತ್ಯದ ಕುರಿತಾಗಿ ದೀರ್ಘಕಾಲದಿಂದ ನೆನೆಗುದಿಯಲ್ಲಿರುವ ವಿವಾದಕ್ಕೆ ಅಂತ್ಯಹಾಡಲು ಉಭಯದೇಶಗಳು ಮಾತುಕತೆಯ ಮೇಜಿಗೆ ಬರಬೇಕೆಂದು ಆರ್ಮೇನಿಯ ಹಾಗೂ ಅಝರ್‌ಬೈಜಾನ್ ದೇಶಗಳಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಜಂಟಿ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News