×
Ad

ಕೊರೋನ ಸೋಂಕಿಗೆ ಕನಿಷ್ಠ 500 ವೈದ್ಯರು ಸಾವು: ಐಎಂಎ

Update: 2020-10-02 23:40 IST

ಹೊಸದಿಲ್ಲಿ, ಅ. 2: ದೇಶದಲ್ಲಿ ಇದುವರೆಗೆ ಕೊರೋನ ಸೋಂಕಿನಿಂದ ಕನಿಷ್ಠ 500 ವೈದ್ಯರು ಮೃತಪಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ ಶುಕ್ರವಾರ ಹೇಳಿದೆ.

ಈ ಪಟ್ಟಿಯಲ್ಲಿರುವ ಅರ್ಧದಷ್ಟು ವೈದ್ಯರಿಗೆ ಕೇಂದ್ರ ಸರಕಾರ ಕೊರೋನ ಸೋಂಕಿನಿಂದ ಸಾವನ್ನಪ್ಪಿದ ವೈದ್ಯರಿಗೆ ನೀಡುವ ಪರಿಹಾರವನ್ನು ಇತ್ಯರ್ಥಪಡಿಸಿದೆ ಅಥವಾ ಇತ್ಯರ್ಥಪಡಿಸುವ ಪ್ರಕ್ರಿಯೆಯಲ್ಲಿದೆ.

 ಕೊರೋನ ವೈರಸ್ ಸೋಂಕಿಗೆ ಒಳಗಾದವರು ಹಾಗೂ ಅದರಿಂದ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸಂಪೂರ್ಣ ದತ್ತಾಂಶ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದ ಬಳಿಕ ದೇಶಾದ್ಯಂತದ 3.5 ಲಕ್ಷ ವೈದ್ಯರನ್ನು ಪ್ರತಿನಿಧಿಸುತ್ತಿರುವ ಸಂಘಟನೆ ಕಳೆದ ತಿಂಗಳು ಕೇಂದ್ರ ಸರಕಾರದ ನಿರ್ಲಕ್ಷತೆ ಹಾಗೂ ಕರ್ತವ್ಯಲೋಪವನ್ನು ಟೀಕಿಸಿತ್ತು. ‘‘ದೇಶದಲ್ಲಿ ಇದುವರೆಗೆ ಕೊರೋನ ಸೋಂಕಿಗೆ ಚಿಕಿತ್ಸೆ ನೀಡಿದ್ದ 515 ವೈದ್ಯರು ಮೃತಪಟ್ಟಿದ್ದಾರೆ ಎಂದು ನಮ್ಮ ಇತ್ತೀಚೆಗಿನ ದತ್ತಾಂಶ ಹೇಳುತ್ತಿದೆ’’ ಎಂದು ಸಂಘಟನೆಯ ಅಧ್ಯಕ್ಷ ಡಾ. ರಾಜನ್ ಶರ್ಮಾ ಹೇಳಿದ್ದಾರೆ.

ಐಎಂಎನ ನಮ್ಮ ವಿವಿಧ ಶಾಖೆಗಳ ಮೂಲಕ ಗುರುತಿಸಲಾದ ಇವರೆಲ್ಲ ಅಲೋಪತಿ ವೈದ್ಯರು. ದೇಶಾದ್ಯಂತ ಐಎಂಎನ 1,746 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಶರ್ಮಾ ಹೇಳಿದ್ದಾರೆ.

 60 ರಿಂದ 70 ಪ್ರಾಯ ಗುಂಪಿನ 201 ವೈದ್ಯರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. 50 ರಿಂದ 60 ಪ್ರಾಯ ಗುಂಪಿನ 171 ವೈದ್ಯರು, 70 ಹಾಗೂ ಅದಕ್ಕಿಂತ ಮೇಲಿನ ಪ್ರಾಯ ಗುಂಪಿನ 66 ವೈದ್ಯರು, 35ರಿಂದ 50 ಪ್ರಾಯ ಗುಂಪಿನ 59 ವೈದ್ಯರು ಮೃತಪಟ್ಟಿದ್ದಾರೆ ಎಂದು ಸಂಘಟನೆಯ ದತ್ತಾಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News