ಶೇ.6.5ರಷ್ಟು ಅಮೆರಿಕನ್ ಭಾರತೀಯರು ಕಡುಬಡವರು!
ವಾಶಿಂಗ್ಟನ್,ಅ.2: ಅಮೆರಿಕದಲ್ಲಿ ನೆಲೆಸಿರುವ ಶೇ.6ಕ್ಕೂ ಅಧಿಕ ಸಂಖ್ಯೆಯ ಭಾರತೀಯರು ಬಡತನದಲ್ಲಿ ಬದುಕುತ್ತಿದ್ದಾರೆಂದು ವರದಿಯೊಂದು ತಿಳಿಸಿದೆ.
ಅಮೆರಿಕದಲ್ಲಿ ನೆಲೆಸಿರುವ 40.50 ಲಕ್ಷ ಭಾರತೀಯರ ಪೈಕಿ ಅಂದಾಜು ಶೇ.6.5 ಮಂದಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದ್ಜಾರೆ. ಕೋವಿಡ್-19 ಸನ್ನಿವೇಶವು ಭಾರತೀಯ ಅಮೆರಿಕನ್ನರ ಬಡತನವನ್ನು ಇನ್ನಷ್ಟು ಹೆಚ್ಚಿಸಿದೆಯೆಂದು ಸಮೀಕ್ಷೆಯು ಹೇಳಿದೆ.
ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಪೌಲ್‌ನಿಟ್ಝ್ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ಪ್ರೊಫೆಸರ್‌ಗಳಾದ ದೇವೇಶ್ ಕಪೂರ್ ಹಾಗೂ ಜಸ್ವಂತ್ ಬಾಜ್ವಾ ನೇತೃತ್ವದಲ್ಲಿ ಈ ಅಧ್ಯಯನವನ್ನು ನಡೆಸಲಾಗಿತ್ತು. ಅಮೆರಿಕನ್ ಭಾರತೀಯರ ಬಡತನದ ಬಗ್ಗೆ ಬೆಳಕು ಚೆಲ್ಲಲು ನಡೆಸಲಾದ ಈ ಅಧ್ಯಯನ ವರದಿಯನ್ನು ಗುರುವಾರ ನಡೆದ ಇಂಡಿಯನ್ ಡಯಾಸ್ಫೋರಾ ಶೃಂಗಸಭೆಯಲ್ಲಿ ಮಂಡಿಸಲಾಯಿತು. ಈ ವರದಿಯ ಮೂಲಕ ಭಾರತೀಯ ಮೂಲದ ಅಮೆರಿಕನ್ನರ ಬಡತನದ ಬಗ್ಗೆ ಗಮನಸೆಳೆಯಲು ಬಯಸಿದ್ದೇವೆ ಎಂದು ಇಂಡಿಯಾ ಡಯಾಸ್ಫೋರಾದ ಸ್ಥಾಪಕ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.
ಬಡತನದ ಬವಣೆಯನ್ನು ಎದುರಿಸುತ್ತಿರುವ ಭಾರತೀಯ ಅಮೆರಿಕನ್ನರು ಬಂಗಾಳಿ ಹಾಗೂ ಪಂಜಾಬಿ ಭಾಷಿಕರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆಂದು ವರದಿ ಹೇಳಿದೆ. ಆದರೆ ಕಪ್ಪುಜನಾಂಗೀಯ ಹಾಗೂ ಹಿಸ್ಪಾನಿಕ್ ಮೂಲದ ಅಮೆರಿಕನ್ ನಾಗರಿಕರಿಗೆ ಹೋಲಿಸಿದರೆ ಭಾರತೀಯ ಮೂಲದ ಅಮೆರಿಕನ್ನರ ಬಡತನ ಕಡಿಮೆ ಇದೆಯೆಂದು ಕಪೂರ್ ಹೇಳಿದ್ದಾರೆ.