×
Ad

ಬಿಹಾರ ಚುನಾವಣೆ: ಆರ್‌ಜೆಡಿ-ಕಾಂಗ್ರೆಸ್ ಮಹಾ ಮೈತ್ರಿಕೂಟದ ಸೀಟು ಹಂಚಿಕೆ ಸೂತ್ರ ಪ್ರಕಟ

Update: 2020-10-03 23:15 IST

ಪಾಟ್ನಾ, ಅ.3: ಆರ್‌ಜೆಡಿ-ಕಾಂಗ್ರೆಸ್ ಒಳಗೊಂಡಿರುವ ಮಹಾಮೈತ್ರಿಕೂಟ ಶನಿವಾರ ತಮ್ಮ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದ್ದು, ಇದೇ ಮೊದಲ ಬಾರಿ ತೇಜಸ್ವಿ ಯಾದವ್ ನಮ್ಮ ನಾಯಕ ಎಂದು ಒಮ್ಮತದಿಂದ ಘೋಷಿಸಿಕೊಂಡಿವೆ.

ಇದೇ ಮೊದಲ ಬಾರಿ ಆರ್‌ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ಸಿಪಿಐ(ಎಂಎಲ್)ಹಾಗೂ ವಿಐಪಿ ಒಂದೇ ವೇದಿಕೆಯಲ್ಲಿ ಒಟ್ಟಾಗಿದ್ದು, ತೇಜಸ್ವಿ ನಾಯಕತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಅವಿನಾಶ್ ಪಾಂಡೆ ಪ್ರಕಟಿಸಿದರು. 

ಸೀಟು ಹಂಚಿಕೆಯ ವಿವರಣೆ ನೀಡಿದ ತೇಜಸ್ವಿ ಯಾದವ್, "ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಸಿಪಿಎಂ(4), ಸಿಪಿಐ(6), ಸಿಪಿಐ(ಎಂಎಲ್)19 ಹಾಗೂ ಆರ್‌ಜೆಡಿ 144 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ನಾವು ವಿಐಪಿ ಹಾಗೂ ಜೆಎಂಎಂ ಪಕ್ಷಗಳಿಗೆ ನಮ್ಮ ಕೋಟಾದಲ್ಲಿ ಸೀಟುಗಳನ್ನು ನೀಡಲಿದ್ದೇವೆ. ಈ ಕುರಿತು ಎರಡು-ಮೂರು ದಿನಗಳಲ್ಲಿ ನಿರ್ಧಾರವಾಗಲಿದೆ’’ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಿಐಪಿ ಪಕ್ಷದ ಮುಖ್ಯಸ್ಥ ಮುಕೇಶ್ ಸಹಾನಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದಾಗಲೇ ಎದ್ದು ಹೊರ ನಡೆದರು. "ನನ್ನ ಬೆನ್ನಿಗೆ ಚೂರಿ ಇರಿಯಲಾಗುತ್ತಿದೆ. ನನಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ 25 ಸೀಟುಗಳ ಭರವಸೆ ನೀಡಲಾಗಿತ್ತು. ನಾನು ಅವರ ಪಕ್ಷದೊಂದಿಗೆ ಇರಲಾರೆ’’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News