ತೆಲುಗು ಸಿನೆಮಾ: ನಿಶ್ಶಬ್ದಂ

Update: 2020-10-03 18:32 GMT

ನಿಶ್ಶಬ್ದಂ ಚಿತ್ರದ ಹೆಸರು ಮತ್ತು ಟ್ರೇಲರ್ ನೋಡಿದವರು ಇದನ್ನೊಂದು ಹಾರರ್ ಸಿನೆಮಾ ಎಂದು ಕಲ್ಪಿಸಿಕೊಂಡಿರುತ್ತಾರೆ. ಚಿತ್ರದ ಆರಂಭ ಕೂಡ ಹಾರರ್ ಮಾದರಿಯಲ್ಲೇ ಇದೆ. ಕತೆಯು ಯುನೈಟೆಡ್ ಸ್ಟೇಟ್ಸ್‌ನ ಸಿಯಾಟ್ಲ್‌ನಲ್ಲಿ ನಡೆದಿರುವಂತೆ ತೋರಿಸಲಾಗಿದೆ. 1972ರಲ್ಲಿ ಬಂಗಲೆಯೊಂದರ ಒಳಗೆ ನಿಗೂಢವಾಗಿ ಒಂದು ಕೊಲೆ ನಡೆಯುತ್ತದೆ. ಕೊಲೆಯ ಬಳಿಕ ಆ ಮನೆ ನಿಗೂಢ ಮನೆಯಾಗಿಯೇ ಗುರುತಿಸಲ್ಪಡುತ್ತದೆ. ಸುಮಾರು ಐದು ದಶಕಗಳ ನಂತರ ಆ ಮನೆಗೆ ಸಾಕ್ಷಿ ಮತ್ತು ಆ್ಯಂಟನಿ ಎನ್ನುವ ಯುವಜೋಡಿಯ ಪ್ರವೇಶವಾಗುತ್ತದೆ. ಮನೆಯ ಒಳಗೆ ಹೋದ ಕ್ಷಣಗಳಲ್ಲೇ ಆ್ಯಂಟನಿಯ ನಿಗೂಢ ಸಾವಾಗುತ್ತದೆ. ಅದಕ್ಕೆ ಏಕೈಕ ಸಾಕ್ಷಿಯಾದ ಸಾಕ್ಷಿಯು ಹೆದರಿ ಹೊರಗೆ ಓಡಿ ಬರುತ್ತಾಳೆ. ಆ ಸಾವಿನ ಬಗ್ಗೆ ನಡೆಯುವ ತನಿಖೆಯಲ್ಲಿ ಹೊರಬರುವ ಹೊಸ ವಿಚಾರಗಳೇ ಚಿತ್ರದ ಕತೆ. ಚಿತ್ರದಲ್ಲಿ ಆ್ಯಂಟನಿ ಪಾತ್ರದಲ್ಲಿ ಮಾಧವನ್ ನಟಿಸಿದ್ದಾರೆ. ಆ್ಯಂಟನಿಯನ್ನು ಒಬ್ಬ ವಿದೇಶಿ ಸೆಲೆಬ್ರಿಟಿ ಎಂದೇ ಹೇಳಬಹುದು. ಮೂಲತಃ ಹೈದರಾಬಾದ್‌ನವನಾದ ಆ್ಯಂಟನಿ ಜನಪ್ರಿಯ ಸೆಲ್ಲೊ ಪ್ಲೇಯರ್ ಆಗಿರುತ್ತಾನೆ. ಚಿತ್ರ ಕಲಾವಿದೆಯಾಗಿರುವ ಸಾಕ್ಷಿಯನ್ನು ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗುತ್ತಾನೆ. ಅವರಿಬ್ಬರ ಆತ್ಮೀಯತೆ ಎಂಗೇಜ್‌ಮೆಂಟ್ ತನಕ ಮುಂದುವರಿಯುತ್ತದೆ. ಅಂದಹಾಗೆ ಸಾಕ್ಷಿಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಸಾಕ್ಷಿಗೆ ಕಿವಿ ಕೇಳದು; ಮಾತು ಬಾರದು. ಆಕೆ ಅನಾಥಾಶ್ರಮದಲ್ಲಿ ಬೆಳೆದವಳು. ಅಲ್ಲಿ ಆಕೆಗೊಬ್ಬ ಆತ್ಮೀಯ ಸ್ನೇಹಿತೆ ಇರುತ್ತಾಳೆ. ಆಕೆಯ ಹೆಸರು ಸೊನಾಲಿ. ಸಾಕ್ಷಿಯ ಬಗ್ಗೆ ತುಂಬ ಪೊಸೆಸಿವ್ ಆಗಿ ವರ್ತಿಸುವ ಈ ಪಾತ್ರವನ್ನು ಶಾಲಿನಿ ಪಾಂಡೆ ನಿಭಾಯಿಸಿದ್ದಾರೆ. ಒಟ್ಟಿನಲ್ಲಿ ಸೊನಾಲಿ ನಾಪತ್ತೆಯಾಗಿದ್ದಾಳೆ ಎನ್ನುವ ಘಟನೆಯೊಂದಿಗೆ ಆ್ಯಂಟನಿ ಕೊಲೆಯ ಕುರಿತಾದ ಸಂದೇಹ ಆಕೆಯ ಮೇಲೆ ಹರಡುತ್ತದೆ. ಕೊನೆಯಲ್ಲಿ ಹಾರರ್ ಬದಿಗೆ ಸರಿದು ಎಲ್ಲ ಸಸ್ಪೆನ್ಸ್ ಚಿತ್ರಗಳಂತೆ ಕೊಲೆಗಾರ ಯಾರು ಎನ್ನುವುದು ಬಯಲಾಗುತ್ತದೆ. ಯಾರದೆಲ್ಲ ಸೇಡುಗಳು ಕೊಲೆಗೆ ಕಾರಣವಾಗುತ್ತವೆ ಎನ್ನುವುದರ ಅನಾವರಣ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಕೊಲೆಗಾರ ಯಾರು ಎನ್ನುವ ವಿಚಾರದಲ್ಲಿ ಮೂಡಿಸಿರುವ ಸಂದೇಹ ಮತ್ತು ಕೊಲೆ ಮಾಡಲು ನೀಡಲಾದ ಕಾರಣಗಳು ಚೆನ್ನಾಗಿ ವರ್ಕೌಟ್ ಆಗಿವೆ. ಸಾಕ್ಷಿ ಪಾತ್ರದಲ್ಲಿ ನಟಿಯಾಗಿ ಅನುಷ್ಕಾ ಶೆಟ್ಟಿ ನಿಶ್ಶಬ್ದಕ್ಕೆ ಭಾಷ್ಯ ಬರೆದಂತೆ ನಟಿಸಿದ್ದಾರೆ. ಆಂಗಿಕ ಭಾಷೆಯನ್ನು ಸುಲಲಿತವೆನ್ನುವಂತೆ ಬಳಸಿರುವುದು ಅವರ ನಟನಾ ಚಾಕಚಕ್ಯತೆಗೆ ಉದಾಹರಣೆ. ಆದರೆ ಚಿತ್ರದ ಪ್ರಮುಖ ಮೈನಸ್ ಕೂಡ ಅನುಷ್ಕಾ ಎಂದೇ ಹೇಳಬಹುದು. ಅನುಷ್ಕಾ ಎಂದರೆ ಗ್ಲಾಮರ್ ವಿತ್ ಹಾರರ್ ಎನ್ನುವ ಇಮೇಜ್ ಸದ್ಯಕ್ಕೆ ಚಾಲ್ತಿಯಲ್ಲಿದೆ. ಆದರೆ ಇಲ್ಲಿ ಎರಡಕ್ಕೂ ಕಡಿವಾಣ ಇದೆ. ಮಾತ್ರವಲ್ಲ, ಬಾಯ್ತುಂಬ ಮಾತೂ ಆಡದಂಥ ಪಾತ್ರ! ಆರಂಭದ ದಿನಗಳಲ್ಲಿ ಅನುಷ್ಕಾ ಮಾಧವನ್ ಜತೆ ನಟಿಸಿದ ಚಿತ್ರದಲ್ಲಿ ಕೂಡ ಗ್ಲಾಮರ್‌ಗೆ ಪ್ರಾಧಾನ್ಯತೆ ನೀಡಲಾಗಿತ್ತು. ಮಾಧವನ್ ತಮ್ಮ ಪಾತ್ರವನ್ನು ತಕ್ಕಂತೆ ನಿಭಾಯಿಸಿದ್ದಾರೆ. ಕೊಲೆಯ ತನಿಖೆಯಲ್ಲಿ ಪ್ರಮುಖ ಪೊಲೀಸ್ ಅಧಿಕಾರಿಯಾಗಿ ಅಂಜಲಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಅನುಷ್ಕಾಗಿಂತ ಹೆಚ್ಚು ಸ್ಕ್ರೀನ್ ಸ್ಪೇಸ್ ಅಂಜಲಿಗೆ ಇದೆ. ತಮ್ಮ ‘ಮಹಾ’ ಹೆಸರಿನ ಪಾತ್ರವನ್ನು ಅವರು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಆದರೆ ಚಿತ್ರದಲ್ಲಿ ತನಿಖೆಯನ್ನು ತೋರಿಸಿದ ರೀತಿ ತೀರ ಸಪ್ಪೆಯಾಗಿದೆ. ಕೊಲೆಯ ತನಿಖೆ ಅದರಲ್ಲಿಯೂ ಅಮೆರಿಕದಂತಹ ದೇಶದಲ್ಲಿ ಇಷ್ಟೊಂದು ಬೇಜವಾಬ್ದಾರಿಯುತವಾಗಿ ನಡೆಯುತ್ತದೆಯೇ ಎಂದು ಅನ್ನಿಸುವಂತಿದೆ. ಮಹಾಳಿಗೆ ಮೇಲಧಿಕಾರಿಯಾಗಿ ಹಾಲಿವುಡ್ ನಟ ಮೈಕಲ್ ಮ್ಯಾಡ್ಸೆನ್ ನಟಿಸಿದ್ದು ತಮ್ಮ ಅಭಿನಯ ಶೈಲಿಯಿಂದಲೇ ಆಸಕ್ತಿ ಮೂಡಿಸುತ್ತಾರೆ. ಸಾಕ್ಷಿಯ ಸ್ನೇಹಿತ ವಿವೇಕ್ ಪಾತ್ರದಲ್ಲಿ ಸುಬ್ಬರಾಜು ಗಮನಾರ್ಹ ನಟನೆ ನೀಡಿದ್ದಾರೆ.

ಎಲ್ಲವೂ ಚೆನ್ನಾಗಿದೆ ಎನ್ನುವಾಗ ನೈಜತೆ ಇಲ್ಲದ ಸಂಭಾಷಣೆ ತಲೆಕೆಡಿಸುತ್ತದೆ. ಸಿನೆಮಾದ ಕತೆ ಇರುವಷ್ಟು ಚೆನ್ನಾಗಿ ಚಿತ್ರಕತೆ ಮೂಡಿ ಬಂದಿಲ್ಲ. ಮುಖ್ಯವಾಗಿ ಕ್ಲೈಮ್ಯಾಕ್ಸ್ ಸನ್ನಿವೇಶ ಚಿತ್ರೀಕರಿಸುವುದನ್ನು ಕಂಡರೆ ಎಂಬತ್ತರ ದಶಕದ ಹೊಡೆದಾಟದ ದೃಶ್ಯಗಳು ನೆನಪಾಗುತ್ತವೆ. ಕೆಲವೊಂದು ಕಡೆ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಹಾಲಿವುಡ್ ಶೈಲಿಯ ಕಲರ್ ಗ್ರೇಡಿಂಗ್ ಚಿತ್ರದ ಆಕರ್ಷಣೆ. ಮಾತ್ರವಲ್ಲ ಆರಂಭದಲ್ಲಿ ಹೇಳಿದಂತೆ ನಿಶ್ಶಬ್ದಂ ಹಾರರ್ ಚಿತ್ರವೆಂದೇ ನೋಡುವವರು ಹೆಚ್ಚು. ಅದರಲ್ಲಿಯೂ ಹಾರರ್ ಚಿತ್ರವೊಂದರಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ ಎಂದರೆ ಆಕೆಯ ಪಾತ್ರದ ಬಗ್ಗೆ ಒಂದು ನಿರೀಕ್ಷೆಯನ್ನು ಇರಿಸಿಕೊಂಡಿರುತ್ತಾರೆ. ಆ ನಿರೀಕ್ಷೆಯನ್ನು ಮೀರಿದ ಚಿತ್ರ ಇದು ಆಗಿರುವುದರಿಂದ ಒಂದಷ್ಟು ಮಂದಿಗೆ ನಿರಾಶೆ ಸಹಜ. ಹಾಗಂತ ಇದು ಕೆಟ್ಟ ಚಿತ್ರವೆಂದು ಹೇಳಲಾಗದು. ಸಿನೆಮಾವು ಅಮೆಜಾನ್ ಪ್ರೈಮ್ ಮೂಲಕ ತೆಲುಗು ಜೊತೆಯಲ್ಲಿಯೇ ತಮಿಳು ಮತ್ತು ಮಲಯಾಳಂನಲ್ಲಿಯೂ ಬಿಡುಗಡೆಯಾಗಿದೆ. ಯಾವುದೇ ನಿರೀಕ್ಷೆಗಳಿಲ್ಲದೆ ಚಿತ್ರ ನೋಡುವ ಪ್ರೇಕ್ಷಕ ‘ನಿಶ್ಶಬ್ದಂ’ ನೋಡಿದರೆ ಒಂದು ಕುತೂಹಲಕಾರಿ ಕತೆಯನ್ನು ಚಿತ್ರದ ಮೂಲಕ ನೋಡಿ ಸಂತೃಪ್ತಿ ಪಡೆಯಬಲ್ಲ.

ತಾರಾಗಣ: ಅನುಷ್ಕಾ ಶೆಟ್ಟಿ, ಮಾಧವನ್

ನಿರ್ದೇಶನ: ಹೇಮಂತ್ ಮಧುಕರ್

ನಿರ್ಮಾಣ: ಕೊನ ವೆಂಕಟ್, ಟಿಜಿ ವಿಶ್ವಪ್ರಸಾದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News