×
Ad

ನಗೊರ್ನೊ-ಕರ್ಬಾಖ್: ಮುಂದುವರಿದ ಘರ್ಷಣೆ

Update: 2020-10-04 23:46 IST

ಬಾಕು,ಅ.4: ಅಝರ್‌ಬೈಝಾನ್‌ನಿಂದ ಪ್ರತ್ಯೇಕಗೊಂಡ ನಗೊರ್ನೊ-ಕರ್ಬಾಖ್‌ನಲ್ಲಿ ಅರ್ಮೇನಿಯ ಹಾಗೂ ಅಝರ್‌ ಬೈಜಾನ್ ಪಡೆಗಳ ನಡುವೆ ಭೀಕರ ಸಂಘರ್ಷ ಶನಿವಾರವೂ ಮುಂದುವರಿದಿದ್ದು, ಭಾರೀ ಸಾವುನೋವು ಸಂಭವಿಸಿರುವ ಭೀತಿ ವ್ಯಕ್ತವಾಗಿದೆ. ಅಝರ್‌ ಬೈಜಾನ್  ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಶನಿವಾರ ರಾತ್ರಿ ಹೇಳಿಕೆಯೊಂದನ್ನು ನೀಡಿ, ತನ್ನ ಪಡೆಗಳು ನಗೊರ್ನೊ-ಕರ್ಬಾಖ್‌ನ ಪಟ್ಟಣ ಹಾಗೂ ಹಲವಾರು ಹಳ್ಳಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಆರ್ಮೇನಿಯದ ಸೇನಾಧಿಕಾರಿಗಳು ಕೂಡಾ ತಮ್ಮ ಸೈನಿಕರು ಅಝರ್‌ಬೈಜಾನ್ ಪಡೆಗಳಿಗೆ ಭಾರೀ ಸಾವು ನೋವು ಉಂಟು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಯುದ್ಧಪೀಡಿತ ನಗೊರ್ನೊ-ಕರ್ಬಾಖ್‌ನ ಗಡಿ ಮುಂಚೂಣಿಯಲ್ಲಿ ಶನಿವಾರ ತೀವ್ರ ಕಾಳಗ ನಡೆದಿದ್ದು, ಆರ್ಮೇನಿಯದ ಪಡೆಗಳು ಮೂರು ಯುದ್ಧವಿಮಾನಗಳನ್ನು ಹೊಡೆದುರುಳಿಸಿವೆಯೆಂದು ಆರ್ಮೇನಿಯನ್ ರಕ್ಷಣಾ ಸಚಿವಾಲಯದ ವಕ್ತಾರ ಶುಶಾನ್ ಸ್ಟೀಪಾನಿಯನ್ ತಿಳಿಸಿದ್ದಾರೆ.

 ತಮ್ಮ ಕಡೆಯಿಂದ 150ಕ್ಕೂ ಅಧಿಕ ಸೈನಿಕರು ಮೃತಪಟ್ಟಿರುವುದಾಗಿ ನಗೊರ್ನೊ-ಕರ್ಬಾಖ್‌ನ ಪ್ರತ್ಯೇಕವಾದಿ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆಝರ್‌ಬೈಜಾನ್ ಅಧಿಕಾರಿಗಳು ತಮ್ಮ ಸೈನಿಕರ ಸಾವು ನೋವಿನ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಆದರೆ ಸಂಘರ್ಷದಲ್ಲಿ 19 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 55 ಮಂದಿ ಗಾಯಗೊಂಡಿರುವುದಾಗಿ ಹೇಳಿದ್ದಾರೆ.

ಸಂಘರ್ಷದಲ್ಲಿ 3 ಸಾವಿರಕ್ಕೂ ಅಧಿಕ ಅಝರ್‌ಬೈಜಾನ್ ಯೋಧರು ಸಾವನ್ನಪ್ಪಿರುವುದಾಗಿ ನಗೊರ್ನೊ-ಕರ್ಬಾಖ್ ಸ್ವಾಯತ್ತ ಸರಕಾರದ ಅಧ್ಯಕ್ಷರ ವಕ್ತಾರ ವಹ್ರಾಮ್ ಪೊಗೊಸ್ಯಾನ್ ತಿಳಿಸಿದ್ದಾರೆ.

1991ರಲ್ಲಿ ಸೋವಿಯತ್ ಪತನದ ಬಳಿಕ ನಗೊರ್ನೊ-ಕರ್ಬಾಖ್ ಅಝರ್ ಬೈಜಾನ್‌ನಿಂದ ಪ್ರತ್ಯೇಕಗೊಂಡ ಸ್ವಾಯತ್ತೆಯನ್ನು ಘೋಷಿಸಿಕೊಂಡಿತ್ತು. ಆ ಬಳಿಕ ಅದರ ಮೇಲೆ ಹಿಡಿತ ಸಾಧಿಸಲು ಆರ್ಮೆನಿಯ ಹಾಗೂ ಅಝರ್‌ಬೈಜಾನ್‌ಗಳು ಸಂಘರ್ಷದಲ್ಲಿ ತೊಡಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News