ನಾಗರಿಕರನ್ನು ಗುರಿಯಾಗಿಸಿ ನಗರಗಳ ಮೇಲೆ ದಾಳಿ: ಆರ್ಮೇನಿಯ, ಅಝರ್‌ಬೈಜಾನ್‌ಗಳಿಂದ ಆರೋಪ, ಪ್ರತ್ಯಾರೋಪ
ಮಾಸ್ಕೋ (ರಶ್ಯ), ಅ. 5: ವಿವಾದಾಸ್ಪದ ನಗೋರ್ನೊ-ಕರಬಾಖ್ ವಲಯಕ್ಕಾಗಿ ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳು ನಡೆಸುತ್ತಿರುವ ಯುದ್ಧ ಎರಡನೇ ವಾರಕ್ಕೆ ಕಾಲಿಟ್ಟಿದೆ. ತಮ್ಮ ಪ್ರಮುಖ ನಗರಗಳನ್ನು ಗುರಿಯಾಗಿಸಿ ಹಾಗೂ ನಾಗರಿಕರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿ ಶೆಲ್ ದಾಳಿಗಳನ್ನು ನಡೆಸಲಾಗಿದೆ ಎಂಬುದಾಗಿ ಎರಡೂ ದೇಶಗಳ ಆರೋಪಿಸಿವೆ.
ರವಿವಾರ ಅಝರ್‌ಬೈಜಾನ್ ಪಡೆಗಳು ಸ್ಟೆಪನಕರ್ಟ್ ನಗರದ ಮೇಲೆ ದಾಳಿ ನಡೆಸುವಂತೆ ಕಾಣುವ ದೃಶ್ಯಾವಳಿಗಳನ್ನು ಆರ್ಮೇನಿಯ ಸರಕಾರಿ ಒಡೆತನದ ಮಾಹಿತಿ ಕೇಂದ್ರ ಬಿಡುಗಡೆಗೊಳಿಸಿದೆ. ಈ ದಾಳಿಯಲ್ಲಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಆರ್ಮೇನಿಯ ಅಧಿಕಾರಿಗಳು ಹೇಳಿದ್ದಾರೆ.
ಒಂದು ಅಪಾರ್ಟ್‌ಮೆಂಟ್ ಬ್ಲಾಕ್ ಸೇರಿದಂತೆ ತೀವ್ರವಾಗಿ ಹಾನಿಗೊಂಡಿರುವ ಕಟ್ಟಡಗಳು ಹಾಗೂ ಅವಶೇಷಗಳಿಂದ ತುಂಬಿರುವ ರಸ್ತೆಯೊಂದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
ಅದೇ ವೇಳೆ, ಆರ್ಮೇನಿಯದ ಪಡೆಗಳು ರವಿವಾರ ತನ್ನ ಮೂರು ಪಟ್ಟಣಗಳಾದ ಬೇಲಗನ್, ಬಾರ್ಡ ಮತ್ತು ಟೆರ್ಟರ್‌ಗಳ ಮೇಲೆ ಶೆಲ್ ದಾಳಿ ನಡೆಸುತ್ತಿದೆ ಎಂದು ಅಝರ್‌ಬೈಜಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ. ದೇಶದ ಎರಡನೇ ಮತ್ತು ನಾಲ್ಕನೇ ಅತಿ ದೊಡ್ಡ ನಗರಗಳಾದ ಗಂಜ ಮತ್ತು ಮಿಂಗೆಸೆವಿರ್‌ಗಳ ಮೇಲೆ ದಾಳಿ ನಡೆಸಿದ ಬಳಿಕ ಸಣ್ಣ ಪಟ್ಟಣಗಳನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ ಎಂದು ಅದು ಆರೋಪಿಸಿದೆ.