ಗಾಳಿಯಲ್ಲೂ ಕೊರೋನ ಸೋಂಕು ಹರಡಬಹುದು: ಸಿಡಿಸಿ

Update: 2020-10-06 17:02 GMT

ವಾಶಿಂಗ್ಟನ್, ಅ. 6: ಗಾಳಿಯಲ್ಲಿ ತೇಲುತ್ತಿರುವ ಕೊರೋನ ವೈರಸ್ ಗಂಟೆಗಳ ಕಾಲ ಸಾಂಕ್ರಾಮಿಕವನ್ನು ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಮೆರಿಕದ ಸೆಂಟರ್ಸ್‌ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ (ಸಿಡಿಸಿ) ಸೋಮವಾರ ಹೇಳಿದೆ. ಇದರೊಂದಿಗೆ, ವೈರಸ್ ಗಾಳಿಯಲ್ಲಿ ಹರಡುವ ಬಗ್ಗೆ ಸಾರ್ವಜನಿಕ ಆರೋಗ್ಯ ಪರಿಣತರು ವ್ಯಾಪಕವಾಗಿ ವ್ಯಕ್ತಪಡಿಸಿರುವ ಕಳವಳವನ್ನು ಸಿಡಿಸಿ ಕೊನೆಗೂ ಎತ್ತಿಹಿಡಿದಂತಾಗಿದೆ.

ಕೋವಿಡ್-19 ಸೋಂಕು ಹೊಂದಿರುವ ಜನರು ಮುಚ್ಚಿದ ಹಾಗೂ ಗಾಳಿಯಾಡದ ಕೋಣೆಗಳಲ್ಲಿ 6 ಅಡಿಗಿಂತಲೂ ಅಧಿಕ ದೂರದಲ್ಲಿರುವ ವ್ಯಕ್ತಿಗಳಿಗೆ ಸೋಂಕು ಹರಡಬಲ್ಲರು ಎನ್ನುವುದಕ್ಕೆ ಪುರಾವೆಯಿದೆ ಎಂದು ಸೋಮವಾರ ಹೊರಡಿಸಿದ ಮಾರ್ಗದರ್ಶಿ ಸೂತ್ರದಲ್ಲಿ ಸಿಡಿಸಿ ತಿಳಿಸಿದೆ.

ಇಂಥದೇ ಎಚ್ಚರಿಕೆಯನ್ನು ಸಿಡಿಸಿ ವಾರಗಳ ಹಿಂದೆಯೊಮ್ಮೆ ಪ್ರಕಟಿಸಿತ್ತು. ಆದರೆ, ಅದನ್ನು ತಕ್ಷಣವೇ ಹಿಂದಕ್ಕೆ ಪಡೆದುಕೊಂಡಿತ್ತು. ಆ ವಿಷಯದಲ್ಲಿ ಭಾರೀ ವಿವಾದ ಉಂಟಾಗಿತ್ತು.

ಇಂಥ ಸಂದರ್ಭಗಳಲ್ಲಿ, ಕೊರೋನ ವೈರಸ್ ಸೋಂಕು ಹೊಂದಿರುವ ಜನರ ಮೂಗು ಮತ್ತು ಬಾಯಿಗಳಿಂದ ಹೊರಬೀಳುವ ಸಣ್ಣ ಹನಿಗಳು ಸಾಕಷ್ಟು ದಟ್ಟವಾಗಿ ವೈರಸ್ ಹರಡಲು ಶಕ್ತವಾಗುತ್ತವೆ ಎಂಬುದಾಗಿ ವಿಜ್ಞಾನಿಗಳು ಭಾವಿಸಿದ್ದಾರೆ ಎಂದು ಸಿಡಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News