ರಾಜ್ಯಗಳ ಸ್ವಾಯತ್ತತೆಯಲ್ಲಿ ಕೇಂದ್ರದ ಹಸ್ತಕ್ಷೇಪ

Update: 2020-10-07 06:14 GMT

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶದ ಒಕ್ಕೂಟ ವ್ಯವಸ್ಥೆಗೆ ಹಿಂದೆಂದೂ ಕಂಡರಿಯದ ಬೆದರಿಕೆ ಎದುರಾಗಿದೆ.ರಾಜ್ಯಗಳ ಸ್ವಾಯತ್ತತೆಯಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಒಂದು ದೇಶ, ಒಂದು ಭಾಷೆ, ಒಂದು ಪಡಿತರ ಚೀಟಿ, ಕೊನೆಗೆ ಒಂದು ಧರ್ಮ ಎಂದೆಲ್ಲ್ಲಾ ದೇಶದ ಬಹುತ್ವದ ಸ್ವರೂಪವನ್ನೇ ನಾಶ ಮಾಡುವ ಹುನ್ನಾರಗಳು ನಡೆಯುತ್ತಲೇ ಇವೆ. ಭಾರತದ ಮೇಲೆ ಏಕಪಕ್ಷ, ಏಕಧರ್ಮ, ಏಕಭಾಷೆ, ಏಕ ವ್ಯಕ್ತಿಯ ಸರ್ವಾಧಿಕಾರವನ್ನು ಹೇರುವ ಅಪಾಯ ಎದುರಾಗಿದೆ.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸಾರಿಗೆ, ಕೃಷಿ, ಶಿಕ್ಷಣ, ಆರೋಗ್ಯದಂತಹ ವಿಷಯಗಳಲ್ಲಿ ರಾಜ್ಯಗಳಿಗೆ ತಮ್ಮದೇ ಆದ ಶಾಸನಗಳನ್ನು ರೂಪಿಸುವ ತೀರ್ಮಾನಗಳನ್ನು ಕೈಗೊಳ್ಳುವ ಅಧಿಕಾರವಿದೆ. ಇದು ಸಂವಿಧಾನದತ್ತವಾದ ಅಧಿಕಾರ.

ವಿಷಾದದ ಸಂಗತಿಯೆಂದರೆ ಇಂತಹ ವಿಷಯಗಳಲ್ಲೂ ಕೇಂದ್ರ ಸರಕಾರ ಇತ್ತೀಚೆಗೆ ಮೂಗು ತೂರಿಸುತ್ತಿದೆ. ಕೇಂದ್ರ ಸರಕಾರ ತಾನೇ ಕಾನೂನುಗಳನ್ನು ರೂಪಿಸಿ ಇಲ್ಲವೇ ತೀರ್ಮಾನಗಳನ್ನು ಕೈಗೊಂಡು ಪ್ರಸ್ತಾವನೆಗಳನ್ನು ರಾಜ್ಯಗಳಿಗೆ ಕಳಿಸುವ ಹೊಸ ಪರಿಪಾಠ ಆರಂಭಿಸಿದೆ. ಜಿಎಸ್‌ಟಿ ವಿಷಯದಲ್ಲಂತೂ ರಾಜ್ಯಗಳಿಗೆ ಆಗಿರುವ ತೆರಿಗೆ ಕೊರತೆಯನ್ನು ಭರ್ತಿ ಮಾಡಿಕೊಡುವ ಬಗ್ಗೆ ಸೋಮವಾರ ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಹತ್ತು ರಾಜ್ಯಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿವೆ.

ಇದೀಗ ವಿದ್ಯುತ್ ಕ್ಷೇತ್ರದಲ್ಲೂ ಕೇಂದ್ರದ ಹಸ್ತಕ್ಷೇಪ ನಡೆದಿದೆ. ಬೆಂಗಳೂರು ವಿದ್ಯುತ್ ಸರಬರಾಜು ನಿಗಮ(ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಚೆಸ್ಕಾಂ) ಹಾಗೂ ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಗಮ(ಜೆಸ್ಕಾಂ) ವ್ಯಾಪ್ತಿಯಲ್ಲಿನ ವಿದ್ಯುತ್ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರ ಸರಕಾರದ ಈ ಶಿಫಾರಸನ್ನು ಒಪ್ಪಿಕೊಳ್ಳಬಾರದೆಂದು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.ರಾಜ್ಯದ ಹಿತದೃಷ್ಟಿಯಿಂದ ಅಧಿಕಾರಿಗಳು ಕೈಗೊಂಡ ಈ ತೀರ್ಮಾನಕ್ಕೆ ಮುಖ್ಯಮಂತ್ರಿಗಳು ಸಮ್ಮತಿ ನೀಡಿದ ನಂತರ ಕೇಂದ್ರಕ್ಕೆ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ತಿಳಿಸಲಾಗುತ್ತದೆ.

ರಾಜ್ಯಗಳನ್ನು ಕೇಳದೆ ಏಕಪಕ್ಷೀಯವಾಗಿ ವಿದ್ಯುತ್ ಸರಬರಾಜು ಕಂಪೆನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರಕಾರದ ಕ್ರಮದ ಬಗ್ಗೆ ಹನ್ನೊಂದು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ವಿರೋಧಿಸಿವೆ. ವಾಸ್ತವಾಂಶ ಹೀಗಿದ್ದರೂ ರಾಜ್ಯಗಳ ವಿರೋಧವನ್ನು ಲೆಕ್ಕಿಸದೆ ಕೇಂದ್ರ ಸರಕಾರ ಬಲವಂತವಾಗಿ ತನ್ನ ನಿರ್ಧಾರವನ್ನು ಹೇರುತ್ತಿರುವುದು ಸರಿಯಲ್ಲ ಎಂದು ವಿದ್ಯುಚ್ಛಕ್ತಿ ಮಂಡಳಿಯ ನೌಕರರು ತೀವ್ರವಾಗಿ ವಿರೋಧಿಸಿದ್ದಾರೆ.

ಸಂವಿಧಾನಾತ್ಮಕವಾಗಿ ವಿದ್ಯುತ್ ವಿಷಯ ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿದೆ.ವಿದ್ಯುಚ್ಛಕ್ತಿ ರಂಗದಲ್ಲಿ ಆಡಳಿತ ಹಾಗೂ ಕಾರ್ಯತಂತ್ರದಲ್ಲಿ ಆಗ ಬೇಕಾದ ಯಾವುದೇ ಬದಲಾವಣೆಗೆ ಕೇಂದ್ರ ಏಕಪಕ್ಷೀಯವಾಗಿ ತನ್ನ ತೀರ್ಮಾನಗಳನ್ನು ಹೇರಕೂಡದು. ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಚರ್ಚಿಸಿ ಒಮ್ಮತಕ್ಕೆ ಬರಬೇಕಾಗುತ್ತದೆ. ಆದರೆ ರಾಜ್ಯಗಳ ಹಿತಾಸಕ್ತಿಯನ್ನು ಕಡೆಗಣಿಸಿ ಅವುಗಳ ಜೊತೆ ಸಮಾಲೋಚನೆ ಮಾಡದೇ ಕೇಂದ್ರ ಸರಕಾರ ಖಾಸಗೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ.

ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ರಾಜ್ಯದ ಮೂರು ವಿದ್ಯುತ್ ಸರಬರಾಜು ನಿಗಮಗಳನ್ನು ಖಾಸಗಿ ಕಂಪೆನಿಗಳಿಗೆ ನೀಡಿದರೆ ರಾಜಧಾನಿ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳ ವಿದ್ಯುತ್ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ಖಾಸಗಿ ಕಂಪೆನಿಗಳ ಹಿಡಿತಕ್ಕೆ ಹೋಗುತ್ತದೆ. ಒಮ್ಮೆ ಖಾಸಗಿ ಕಂಪೆನಿಗಳ ಕೈಗೆ ಹೋದರೆ ಅಲ್ಲಿ ಜನತೆಯ ಹಿತಾಸಕ್ತಿಯ ಪ್ರಶ್ನೆ ಮುಖ್ಯವಾಗುವುದಿಲ್ಲ. ಕಾರ್ಪೊರೇಟ್ ಕಂಪೆನಿಗಳು ಜನಸೇವೆಗಾಗಿ ಇರುವ ಸಂಸ್ಥೆಗಳಲ್ಲ.ಲಾಭ ಅವುಗಳ ಗುರಿಯಾಗಿರುತ್ತದೆ. ಕಾರಣ ನಾನಾ ನೆಪ ಮುಂದೆ ಮಾಡಿ ವಿದ್ಯುತ್ ದರಗಳು ಸಿಕ್ಕಾಪಟ್ಟೆ ಏರಿಕೆಯಾಗಬಹುದು. ಇದರಿಂದ ಮೊದಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರು ಇನ್ನಷ್ಟು ತೊಂದರೆಗೆ ಒಳಗಾಗಬೇಕಾಗುತ್ತದೆ.

ವಿದ್ಯುತ್ ವ್ಯವಸ್ಥೆ ಒಮ್ಮೆ ಖಾಸಗೀಕರಣಗೊಂಡರೆ ರೈತರ ಕೃಷಿ ಚಟುವಟಿಕೆ ಗಳಿಗೆ ಈಗ ಸಿಗುತ್ತಿರುವ ಉಚಿತ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತದೆ. ಕಡು ಬಡವರಿಗೆ ಸರಕಾರ ನೀಡುತ್ತಿರುವ ಉಚಿತ ವಿದ್ಯುತ್ ಪೂರೈಕೆಗೂ ಕಲ್ಲು ಬೀಳುತ್ತದೆ. ಮತ್ತೊಂದೆಡೆ ಮಧ್ಯಮವರ್ಗದ ಜನರು ಕೂಡ ನಾನಾ ರೀತಿಯ ದುಬಾರಿ ಶುಲ್ಕಗಳಿಗೆ ತಲೆ ಕೊಡಬೇಕಾಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ವಿದ್ಯುತ್ ಸರಬರಾಜು ಸರಿಯಾಗಿ ಆಗದಿರಬಹುದು, ವಿದ್ಯುತ್ ಸೋರಿಕೆಯಿಂದ ಸರಕಾರಕ್ಕೆ ನಷ್ಟವಾಗುತ್ತಿರಬಹುದು. ಆದರೆ ಇವೆಲ್ಲದಕ್ಕೂ ಖಾಸಗೀಕರಣ ಪರಿಹಾರವಲ್ಲ.

ವಿದ್ಯುತ್ ಖಾಸಗೀಕರಣದ ಬದಲಾಗಿ ಈಗಿರುವ ವಿದ್ಯುತ್‌ರಂಗದ ವ್ಯವಸ್ಥೆಯಲ್ಲಿ ಇರುವ ಲೋಪ ದೋಷಗಳನ್ನು ಸರಿಪಡಿಸಲು ಸರಕಾರ ಮುಂದಾಗಬೇಕು. ವಿದ್ಯುತ್ ಎಂಬುದು ಜನರ ಮೂಲಭೂತ ಅಗತ್ಯವಾಗಿದೆ. ಅದನ್ನು ಖಾಸಗಿ ಕಂಪೆನಿಗಳ ವಶಕ್ಕೆ ನೀಡುವುದು ಸರಿಯಲ್ಲ. ಅದರಲ್ಲೂ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇಂದ್ರ ಸರಕಾರ ಇಂತಹ ಜನವಿರೋಧಿ ಕ್ರಮಕ್ಕೆ ಮುಂದಾಗಬಾರದು. ರಾಜ್ಯಗಳ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಒಕ್ಕೂಟ ವ್ಯವಸ್ಥೆಯ ಮೂಲಭೂತ ತತ್ವಗಳಿಗೆ ಧಕ್ಕೆ ತರಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News