ಲಂಡನ್: ತಮಿಳುನಾಡು ಮೂಲದ ಕುಟುಂಬ ಸಂಶಯಾಸ್ಪದ ರೀತಿಯಲ್ಲಿ ಸಾವು
ಲಂಡನ್, ಅ. 7: ಪಶ್ಚಿಮ ಲಂಡನ್‌ನ ಒಂದು ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ತಮಿಳು ಮೂಲದ ಕುಟುಂಬವೊಂದರ ಮೂವರು ಸದಸ್ಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದರ ಬೆನ್ನಿಗೇ, ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಕೊಲೆ ತನಿಖೆಯನ್ನು ಆರಂಭಿಸಿದ್ದಾರೆ. 36 ವರ್ಷದ ಮಹಿಳೆ ಪೂರ್ಣಕಾಮೇಶ್ವರಿ ಶಿವರಾಜ್‌ರ ಸುರಕ್ಷತೆ ಬಗ್ಗೆ ಕಳವಳಗಳು ವ್ಯಕ್ತವಾದ ಬಳಿಕ ಮೆಟ್ರೊಪಾಲಿಟನ್ ಪೊಲೀಸರ ತಂಡವೊಂದು ಮಂಗಳವಾರ ಬ್ರೆಂಟ್‌ಫೋರ್ಡ್‌ನಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡದ ಕೋಣೆಗೆ ಬಲವಂತವಾಗಿ ನುಗ್ಗಿದೆ.
ಆಗ ಮಹಿಳೆ ಮತ್ತು ಅವರ ಮೂರು ವರ್ಷದ ಮಗನ ಮೃತದೇಹಗಳು ಪತ್ತೆಯಾಗಿವೆ. ಅವರ ಗಂಡ ತೀವ್ರ ಚೂರಿ ಇರಿತದ ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಅವರು ಕೂಡ ಕೊನೆಯುಸಿರೆಳೆದರು.
ಪೊಲೀಸರು ಫ್ಲ್ಯಾಟ್‌ನ ಒಳಗೆ ಪ್ರವೇಶಿಸಿದಾಗ 42 ವರ್ಷದ ಗಂಡ ಸ್ವತಃ ಚೂರಿಯಿಂದ ಇರಿದುಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಈ ವ್ಯಕ್ತಿಯು ತನ್ನ ಹೆಂಡತಿ ಮತ್ತು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.