ಎಚ್-1ಬಿ ವೀಸಾ ವಿತರಣೆಗೆ ನೂತನ ನಿಯಮ: ಅವೆುರಿಕ ಸರಕಾರದಿಂದ ಆದೇಶ

Update: 2020-10-07 17:29 GMT

ವಾಶಿಂಗ್ಟನ್, ಅ. 7: ತಂತ್ರಜ್ಞಾನ ಕಂಪೆನಿಗಳು ಹೆಚ್ಚಾಗಿ ಬಳಸುವ ವಲಸೆ ವೀಸಾಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ಮಂಗಳವಾರ ಆದೇಶವೊಂದನ್ನು ಹೊರಡಿಸಿದೆ. ನೂತನ ನಿಯಮಗಳು ಅಮೆರಿಕದ ಉದ್ಯೋಗಿಗಳಿಗೆ ಪೂರಕವಾಗಿವೆ ಎಂದು ಅದು ಹೇಳಿದೆ.

 ಅತ್ಯುನ್ನತ ಕೌಶಲ ಹೊಂದಿರುವ ಉದ್ಯೋಗಿಗಳಿಗೆ ನೀಡಲಾಗುವ ಎಚ್-1ಬಿ ವೀಸಾಗಳಿಗಾಗಿ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ ಎಂದು ಆಂತರಿಕ ಭದ್ರತಾ ಇಲಾಖೆ ಪ್ರಕಟಿಸಿದೆ.

 ಅಧ್ಯಕ್ಷೀಯ ಚುನಾವಣಾ ಹೊಸ್ತಿಲಲ್ಲಿ, ಅತ್ಯಂತ ಬೇಡಿಕೆಯ ಎಚ್-1ಬಿ ವೀಸಾವನ್ನು ಅಧ್ಯಕ್ಷ ಟ್ರಂಪ್ ಚುನಾವಣಾ ವಿಷಯವನ್ನಾಗಿಸಿದ್ದಾರೆ. ಇದಕ್ಕೂ ಮೊದಲು, ಎಚ್-1ಬಿ ವೀಸಾ ವಿತರಣೆಯನ್ನು ಈ ವರ್ಷದ ಕೊನೆಯವರೆಗೆ ಅವರ ಆಡಳಿತವು ಸ್ಥಗಿತಗೊಳಿಸಿತ್ತು. ಆದರೆ, ಕಳೆದ ವಾರ ಫೆಡರಲ್ ನ್ಯಾಯಾಧೀಶರೊಬ್ಬರು ಆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ಮಂಗಳವಾರ ಹೊರಡಿಸಲಾದ ನೂತನ ನಿಯಮಾವಳಿಗಳು ‘ವಿಶೇಷ ಉದ್ಯೋಗ’ದ ವ್ಯಾಖ್ಯೆಯನ್ನು ಕಿರಿದುಗೊಳಿಸುತ್ತದೆ. ಈಗಿರುವ ವ್ಯಾಖ್ಯೆಯನ್ನು ಬಳಸಿಕೊಂಡು ಕಂಪೆನಿಗಳು ವ್ಯವಸ್ಥೆಯೊಂದಿಗೆ ಆಡುತ್ತಿವೆ ಎನ್ನುವುದು ಅದರ ವಾದ. ನೂತನ ನಿಯಮಾವಳಿಗಳ ವಿವರಗಳನ್ನು ಹೊರಡಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News