ಗ್ರೀಸ್: ನಿಯೋ-ನಾಝಿ ಪಕ್ಷದ ನಾಯಕರ ವಿಚಾರಣೆ ನ್ಯಾಯಾಲಯದ ಹೊರಗೆ ಜಮಾಯಿಸಿದ ಸಾವಿರಾರು ಜನ

Update: 2020-10-07 18:21 GMT

ಅಥೆನ್ಸ್ (ಗ್ರೀಸ್), ಅ. 7: ಗ್ರೀಸ್‌ನ ನಿಯೋ-ನಾಝಿ (ನಾಝಿ ಸಿದ್ಧಾಂತಗಳನ್ನು ಬೆಂಬಲಿಸುವ)ಪಕ್ಷ ‘ಗೋಲ್ಡನ್ ಡಾನ್’ನ ನಾಯಕರ ವಿಚಾರಣೆಯ ವೇಳೆ ಇಲ್ಲಿನ ನ್ಯಾಯಾಲಯವೊಂದರ ಹೊರಗೆ ಬುಧವಾರ 8,000ಕ್ಕೂ ಅಧಿಕ ಮಂದಿ ಜಮಾಯಿಸಿದ್ದಾರೆ.

ದೇಶದ ಆಧುನಿಕ ರಾಜಕೀಯ ಇತಿಹಾಸದ ಅತ್ಯಂತ ಪ್ರಮುಖ ವಿಚಾರಣೆಯ ಸಮಾರೋಪವನ್ನು ನೋಡಲು ಜನರು ಉತ್ಸುಕರಾಗಿದ್ದಾರೆ. ಫ್ಯಾಶಿಸ್ಟ್ ವಿರೋಧಿ ಚಳವಳಿ, ಕಾರ್ಮಿಕ ಸಂಘಗಳು ಮತ್ತು ಎಡ ಪಕ್ಷಗಳ ಕರೆಯಂತೆ, ತೀರ್ಪು ಘೋಷಣೆಯಾಗುವ ಎರಡು ಗಂಟೆಗಳ ಮೊದಲೇ ನ್ಯಾಯಾಲಯದ ಹೊರಗೆ ಜನರು ಜಮಾಯಿಸಲು ಆರಂಭಿಸಿದರು.

‘‘ನಾಝಿಗಳು ಜೈಲಿನಲ್ಲಿರಬೇಕು ಎಂದು ಜನರು ಬಯಸುತ್ತಾರೆ’’ ಎಂಬ ಫಲಕವನ್ನು ಜನರು ಈ ಸಂದರ್ಭದಲ್ಲಿ ಪ್ರದರ್ಶಿಸಿದರು. ಜನರನ್ನು ನಿಯಂತ್ರಿಸಲು ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

ಐದು ವರ್ಷಗಳಿಂದ ವಿಚಾರಣೆ ನಡೆದ ಬಳಿಕ, ಗೋಲ್ಡನ್ ಡಾನ್ ಕ್ರಿಮಿನಲ್ ಸಂಘಟನೆಯೇ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಲಿದೆ.

ಈ ಪಕ್ಷವು ಸ್ಥಾಪಕ ನಿಕೋಸ್ ಮೈಕಲೋಲಿಯಕೊಸ್ ಮತ್ತು ಆತನ ಆಂತರಿಕ ವಲಯದ ಜನರ ಆದೇಶಗಳಂತೆ ಹಲವಾರು ಎದುರಾಳಿಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದೆ.

2013 ಸೆಪ್ಟೆಂಬರ್‌ ನಲ್ಲಿ ಅಥೆನ್ಸ್‌ನಲ್ಲಿ ಫ್ಯಾಶಿಸ್ಟ್ ವಿರೋಧಿ ರ್ಯಾಪ್ ಗಾಯಕ ಪವ್ಲೊಸ್ ಫೈಸಸ್‌ರನ್ನು ತಡರಾತ್ರಿ ಇರಿದು ಕೊಂದ ಬಳಿಕ ಪಕ್ಷದ ನಾಯಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಹಂತಕ ಹಾಗೂ ಟ್ರಕ್ ಚಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪಕ್ಷದ ಒಟ್ಟು 68 ಸದಸ್ಯರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News