ಹತ್ರಸ್ ಪ್ರಕರಣ: ಯುವತಿಯ ಕುಟುಂಬ ನನ್ನ ಗೆಳೆತನ ವಿರೋಧಿಸುತ್ತಿತ್ತು: ಪ್ರಧಾನ ಆರೋಪಿ
ಹಾಥರಸ್, ಅ. 8: ನನ್ನನ್ನು ಹಾಗೂ ಇತರ ಮೂವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದುದರಿಂದ ನಮಗೆ ನ್ಯಾಯ ಒದಗಿಸಬೇಕೆಂದು ಕೋರಿ ಹಾಥರಸ್ ಪ್ರಕರಣದ ಪ್ರಧಾನ ಆರೋಪಿ ಉತ್ತರಪ್ರದೇಶದ ಪೊಲೀಸರಿಗೆ ಪತ್ರ ಬರೆದಿದ್ದಾನೆ.
ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ದಲಿತ ಯುವತಿಯ ಕುಟುಂಬಕ್ಕೆ ಓರ್ವ ಆರೋಪಿಯ ಪರಿಚಯವಿತ್ತು ಎಂಬುದಕ್ಕೆ ಪುರಾವೆ ಇದೆ ಎಂದು ಪೊಲೀಸರು ಪ್ರತಿಪಾದಿಸುತ್ತಿರುವ ನಡುವೆ ಪ್ರಧಾನ ಆರೋಪಿ ಪೊಲೀಸರಿಗೆ ಈ ಪತ್ರ ಬರೆದಿದ್ದಾನೆ.
ಇತರ ಮೂವರೊಂದಿಗೆ ಕಾರಾಗೃಹದಲ್ಲಿರುವ ಸಂದೀಪ್ ಠಾಕೂರ್ ಹತ್ರಸ್‌ನ ಪೊಲೀಸರಿಗೆ ಈ ಪತ್ರ ಬರೆದಿದ್ದಾನೆ. ಪತ್ರದಲ್ಲಿ, ‘‘ತಾನು ಹಾಗೂ 20 ವರ್ಷದ ಯುವತಿ ಗಳೆಯರು’’ ಎಂದಿದ್ದಾನೆ. ‘‘ನಾವು ಪರಸ್ಪರ ಭೇಟಿಯಾಗುವುದಲ್ಲದೆ, ಪೋನ್‌ನಲ್ಲಿ ಮಾತನಾಡುತ್ತಿದ್ದೆವು’’ ಎಂದು ಹಿಂದಿಯಲ್ಲಿ ಬರೆದ ಪತ್ರದಲ್ಲಿ ಸಂದೀಪ್ ಠಾಕೂರ್ ಹೇಳಿದ್ದಾನೆ.
ಪತ್ರಕ್ಕೆ ನಾಲ್ವರು ಆರೋಪಿಗಳು ಹೆಬ್ಬೆಟ್ಟು ಹಾಕಿದ್ದಾರೆ. ನಮ್ಮ ಗೆಳೆತನ ಆಕೆಯ ಕುಟುಂಬಕ್ಕೆ ಇಷ್ಟ ಇರಲಿಲ್ಲ. ಘಟನೆ ನಡೆದ ದಿನ ನಾನು ಆಕೆಯನ್ನು ಭೇಟಿಯಾಗಲು ಹೊಲಕ್ಕೆ ಹೋಗಿದ್ದೆ. ಆಗ ಅಲ್ಲಿ ಆಕೆಯ ತಾಯಿ ಹಾಗೂ ಸಹೋದರ ಕೂಡ ಇದ್ದರು. ನಾನು ಆಕೆಯ ಬಗ್ಗೆ ವಿಚಾರಿಸಿ ಮನೆಗೆ ಹಿಂದಿರುಗಿದ್ದೆ ಎಂದು ಆತ ಹೇಳಿದ್ದಾನೆ. ‘‘ಅನಂತರ ನಮ್ಮ ಗೆಳೆತನದ ಕಾರಣಕ್ಕೆ ತಾಯಿ ಹಾಗೂ ಸಹೋದರ ಆಕೆಯನ್ನು ಥಳಿಸಿದ್ದು, ತೀವ್ರ ಗಾಯಗೊಂಡಿದ್ದಾಳೆ ಎಂದು ಗ್ರಾಮಸ್ಥರಿಂದ ತಿಳಿದುಕೊಂಡೆ. ನಾನು ಆಕೆಗೆ ಥಳಿಸಿಲ್ಲ ಅಥವಾ ಯಾವುದೇ ತಪ್ಪೆಸಗಿಲ್ಲ. ಆಕೆಯ ತಾಯಿ ಹಾಗೂ ಸಹೋದರ ನನ್ನ ಹಾಗೂ ಇತರ ಮೂವರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನಮ್ಮನ್ನು ಜೈಲಿಗೆ ಕಳುಹಿಸಿದ್ದಾರೆ. ನಾವು ಅಮಾಯಕರು. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಿ ಎಂದು ನಾವು ಮನವಿ ಮಾಡುತ್ತಿದ್ದೇವೆ’’ ಎಂದು ಸಂದೀಪ್ ಠಾಕೂರ್ ಪತ್ರದಲ್ಲಿ ಹೇಳಿದ್ದಾನೆ.