ಯುದ್ಧ ವಿಮಾನದ ರಹಸ್ಯ ವಿವರ ಪಾಕಿಸ್ತಾನದ ಐಎಸ್‌ಐಗೆ ಪೂರೈಕೆ: ಎಚ್‌ಎಎಲ್ ಉದ್ಯೋಗಿಯ ಬಂಧನ

Update: 2020-10-09 15:05 GMT

ಮುಂಬೈ, ಅ. 9: ಯುದ್ಧ ವಿಮಾನದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐಗೆ ರವಾನಿಸಿದ ಆರೋಪದಲ್ಲಿ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನ ಉದ್ಯೋಗಿಯೋರ್ವನನ್ನು ಶುಕ್ರವಾರ ಬಂಧಿಸಿದೆ.

‘‘ಈ ವ್ಯಕ್ತಿ ಐಸ್‌ಐಯೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡ ಬಗ್ಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದ ನಾಸಿಕ್ ಘಟಕ ಖಚಿತ ಮಾಹಿತಿ ಸ್ವೀಕರಿಸಿತ್ತು. ದೀಪಕ್ ಶಿರ್ಸಾಥ್ ಎಂಬ ಈ ವ್ಯಕ್ತಿ ವ್ಯಾಟ್ಸ್ ಆ್ಯಪ್ ಹಾಗೂ ಸಾಮಾಜಿಕ ಮಾಧ್ಯಮದ ಮೂಲಕ ಭಾರತದ ಯುದ್ಧ ವಿಮಾನ ಹಾಗೂ ಅದರ ಉತ್ಪಾದನಾ ಘಟಕದ ಬಗ್ಗೆ ಪಾಕಿಸ್ತಾನದ ಐಎಸ್‌ಐಗೆ ರಹಸ್ಯ ಮಾಹಿತಿ ಪೂರೈಸುತ್ತಿದ್ದ’’ ಎಂದು ಡಿಸಿಪಿ ವಿನಯ್ ರಾಥೋಡ್ ಹೇಳಿದ್ದಾರೆ. ಈತ ನಾಸಿಕ್‌ನ ವಾಯ ನೆಲೆಯ ಸಮೀಪದ ಒಝಾರ್‌ನಲ್ಲಿರುವ ಎಚ್‌ಎಎಲ್‌ನ ಉತ್ಪಾದನಾ ಘಟಕ ಹಾಗೂ ಉತ್ಪಾದನಾ ಘಟಕದ ಒಳಗಿನ ನಿಷೇಧಿತ ಪ್ರದೇಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೂಡ ಪಾಕಿಸ್ತಾನದ ಐಎಸ್‌ಐಗೆ ರವಾನಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಎಚ್‌ಎಎಲ್‌ನಲ್ಲಿ ಉಪ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿರುವ 41 ವರ್ಷದ ಈ ವ್ಯಕ್ತಿಯ ವಿರುದ್ಧ ‘ಅಧಿಕೃತ ರಹಸ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನಿಂದ ಐದು ಸಿಮ್ ಕಾರ್ಡ್‌ಗಳೊಂದಿಗೆ ಮೂರು ಮೊಬೈಲ್ ಫೋನ್, ಎರಡು ಮೆಮೊರಿ ಕಾರ್ಡ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಚ್‌ಎಎಲ್‌ನ ವೈಮಾನಿಕ ವಿಭಾಗ ನಾಸಿಕ್‌ನಿಂದ 24 ಕಿ.ಮೀ. ದೂರದಲ್ಲಿರುವ ಓಝಾರ್‌ನಲ್ಲಿ ಇದೆ. 1964ರಲ್ಲಿ ಸ್ಥಾಪಿಸಲಾದ ಈ ವಿಭಾಗ ಮಿಗ್-21ಎಂ, ಮಿಗ್-21 ಬಿಐಎಸ್, ಮಿಗ್-27 ಎಂ ಮೊದಲಾದ ವಿವಿಧ ಮಿಗ್‌ಗಳನ್ನು ಉತ್ಪಾದಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News