ದಿಲ್ಲಿ ದಂಗೆ ಪ್ರಕರಣ:ತಾಹಿರ್ ಹುಸೇನ್ ಆಪ್ತನಿಗೆ ಜಾಮೀನು ಮಂಜೂರು

Update: 2020-10-09 18:27 GMT

 ಹೊಸದಿಲ್ಲಿ,ಅ.9: ಈಶಾನ್ಯ ದಿಲ್ಲಿಯಲ್ಲಿ ಕಳೆದ ಫೆಬ್ರವರಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಾಜಿ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ಅವರ ನಿಕಟವರ್ತಿ ಇರ್ಷಾದ್ ಅಹ್ಮದ್ ಎಂಬಾತನಿಗೆ ಜಾಮೀನು ಮಂಜೂರು ಮಾಡಿರುವ ದಿಲ್ಲಿ ಉಚ್ಚ ನ್ಯಾಯಾಲಯವು,ಅಹ್ಮದ್ ವಿರುದ್ಧ ಹೇಳಿಕೆಗಳನ್ನು ದಾಖಲಿಸಿರುವ ಪ್ರತ್ಯಕ್ಷದರ್ಶಿ ಸಾಕ್ಷಿಗಳೆನ್ನಲಾದ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಪೊಲೀಸರೇ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದೆ.

ಅಹ್ಮದ್‌ಗೆ ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾ.ಸುರೇಶ್ ಕೈಟ್ ನೇತೃತ್ವದ ಪೀಠವು ರದ್ದುಗೊಳಿಸಿತು.

ಘರ್ಷಣೆಗಳ ಸಂದರ್ಭ ದಂಗೆ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಿದ್ದ ಆರೋಪವನ್ನು ಅಹ್ಮದ್ ವಿರುದ್ಧ ಹೊರಿಸಲಾಗಿದೆ.

 ದಂಗೆಗಳಿಗೆ ಸಂಬಂಧಿಸಿದಂತೆ ಅಹ್ಮದ್ ವಿರುದ್ಧ ಇನ್ನೂ ಏಳು ಪ್ರಕರಣಗಳಿದ್ದು, ಇದು ಆತನಿಗೆ ಜಾಮೀನು ಮಂಜೂರಾಗಿರುವ ಮೊದಲ ಪ್ರಕರಣವಾಗಿದೆ. ಆದರೆ ಇತರ ಎಫ್‌ಐಆರ್‌ಗಳಿಂದಾಗಿ ಅಹ್ಮದ್ ಜೈಲಿನಲ್ಲಿಯೇ ಇರುವಂತಾಗಿದೆ.

ಘಟನಾಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಎಂದು ಉಲ್ಲೇಖಿಸಲಾಗಿರುವ ಕಾನ್‌ಸ್ಟೇಬಲ್‌ಗಳಾದ ಪವನ್ ಮತ್ತು ಅಂಕಿತ್ ತಾವು ಅರ್ಜಿದಾರನನ್ನು ಮತ್ತು ಸಹ ಆರೋಪಿಯನ್ನು ಗುರುತಿಸಿದ್ದಾಗಿ ಹೇಳಿದ್ದಾರೆ. ಆದರೆ ಘಟನೆ ನಡೆದ ಫೆ.25ರಂದು ಅವರು ಯಾವುದೇ ದೂರು ಸಲ್ಲಿಸಿರಲಿಲ್ಲ ಮತ್ತು ಎಫ್‌ಐಆರ್‌ನ್ನು ಫೆ.28ರಂದು ದಾಖಲಿಸಲಾಗಿತ್ತು. ಹೀಗಾಗಿ ಅವರು ಸುಳ್ಳುಸಾಕ್ಷ ಹೇಳಿರುವಂತೆ ಕಂಡು ಬರುತ್ತಿದೆ ಎಂದು ನ್ಯಾ.ಕೈಟ್ ತನ್ನ ಆದೇಶದಲ್ಲಿ ಹೇಳಿದ್ದಾರೆ.

 ನ್ಯಾಯಾಲಯದ ಅಭಿಪ್ರಾಯವು ಇತರ ಆರೋಪಿಗಳ ಬಿಡುಗಡೆಯ ಮಾರ್ಗವನ್ನು ಸುಗಮಗೊಳಿಸುವ ಮೂಲಕ ಅವರಿಗೂ ಲಾಭ ನೀಡುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಒಟ್ಟಾರೆ ಸಂದರ್ಭಗಳ ಹಿನ್ನೆಲೆಯಲ್ಲಿ ಜಾಮೀನಿಗೆ ಅರ್ಹ ಪ್ರಕರಣವೆಂದು ನ್ಯಾಯಾಲಯವು ಭಾವಿಸಿದ್ದರೂ ಇಂತಹ ಅಭಿಪ್ರಾಯ ಅನಗತ್ಯವಾಗಿತ್ತು ಎಂದು ನ್ಯಾಯವಾದಿ ಜ್ಞಾನಂತ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News