ರಾಜಕೀಯ ಅಧಿಕಾರದಿಂದ ಮಾತ್ರ ದಲಿತರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯ: ಭಾಸ್ಕರ್ ಪ್ರಸಾದ್

Update: 2020-10-10 10:54 GMT

ಉಡುಪಿ, ಅ.10: ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ತಡೆಯಲು ರಾಜಕೀಯ ಅಧಿಕಾರ ಪಡೆಯುವುದೊಂದೇ ಪರಿಹಾರ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿ ರಾಜಕೀಯವಾಗಿ ಪ್ರಬಲರಾಗಬೇಕಾಗಿದೆ ಎಂದು ಹೋರಾಟಗಾರ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಆದಿತ್ಯನಾಥ್ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿರುವ ಶೇ.85ರಷ್ಟು ಮಂದಿ ದಲಿತರು, ಹಿಂದುಳಿದವರ್ಗದವರು, ಅಲ್ಪಸಂಖ್ಯಾತರು ರಾಜಕೀಯ ಅಧಿಕಾರ ಇಲ್ಲದೆ ಕೇವಲ ಶೇ.3ರಷ್ಟಿರುವ ಮೇಲ್ವರ್ಗದವರ ಗುಲಾಮರಾಗಿದ್ದಾರೆ. ಇದರ ಪರಿಣಾಮವಾಗಿ ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಇಲ್ಲಿ ನಿರಂತರವಾಗಿ ದಬ್ಬಾಳಿಕೆಗೆ ಒಳಗಾಗುತ್ತಲೇ ಇದ್ದಾರೆ ಎಂದರು.

ಈ ದೇಶದಲ್ಲಿ ಮಹಿಳೆಯರು ಸ್ವಾತಂತ್ರರಾಗಿ ಬದುಕಲು ಅಂಬೇಡ್ಕರ್ ನೀಡಿರುವ ಸಂವಿಧಾನವೇ ಕಾರಣ ಹೊರತು ದೇವರು, ಧರ್ಮ ಅಲ್ಲ. ಈ ದೇಶದ ಶೋಷಿತರು, ಹಿಂದುಳಿದವರು ರಾಜಕೀಯವಾಗಿ ಪ್ರಬಲ ಆಗಬೇಕು. ದೇಶದ ನಿಜವಾದ ಮೂಲನಿವಾಸಿಗಳ ಕೈಯಲ್ಲಿ ಅಧಿಕಾರ ಇದ್ದರೆ ಯಾವುದೇ ರೀತಿಯ ಅನ್ಯಾಯ ಆಗಲ್ಲ. ಯಾಕೆಂದರೆ ಅವರಲ್ಲಿ ತಾಯಿತನದ ಗುಣ ಇದೆ.  ರಾಜಕೀಯ ಶಕ್ತಿ ಇಲ್ಲದಿದ್ದರೆ ಯಾವುದೇ ರೀತಿಯ ಪ್ರಗತಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಾರ್ಮಿಕ ಮುಖಂಡ ಬಿ.ಎಂ.ಭಟ್ ಮಾತನಾಡಿ, ಈ ದೇಶದಲ್ಲಿ ಮನು ವಾದ ಜಾರಿಗೆ ಮತ್ತು ಸಂವಿಧಾನ ಬದಲಾಯಿಸಲು ಹೊರಟಿರುವ ಬಿಜೆಪಿ ವಿರುದ್ಧ ರಾಜಕೀಯ ಆಂದೋಲನ ನಡೆಸಬೇಕಾದ ಅಗತ್ಯ ಎದುರಾಗಿದೆ. ಇವರು ಹಿಂದು ಧರ್ಮದ ಹೆಸರಿನಲ್ಲಿ ಮನುಧರ್ಮವನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಂದಾಗಿ ಆಂದೋಲನ ನಡೆಸಬೇಕು ಎಂದು ತಿಳಿಸಿದರು.

ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಈ ದೇಶದಲ್ಲಿರುವ ಮೀಸ ಲಾತಿಯನ್ನು ಹತ್ತಿಕ್ಕಲು ಎಲ್ಲವನ್ನು ಖಾಸಗೀಕರಣಗೊಳಿಸುವ ಹುನ್ನಾರ ಮಾಡಲಾಗುತ್ತಿದೆ. ದಲಿತ ಜೀವನ ಪದ್ಧತಿಯನ್ನು ನಾಶ ಮಾಡಲು ಬೇರೆ ಬೇರೆ ತಂತ್ರ ಗಾರಿಕೆಯನ್ನು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ದಲಿತರು, ಹಿಂದುಳಿದವರ್ಗ ದವರಿಗೆ ಬೀದಿ ಬೀದಿಗಳಲ್ಲಿ ಹಲ್ಲೆ ನಡೆಸಿ ಭಯದ ವಾತಾವರಣವನ್ನು ಸೃಷ್ಠಿಸಲಾಗುತ್ತಿದೆ. ಈ ಪಿತೂರಿಯನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಳಿಕ ಪ್ರತಿಭಟನಕಾರರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಸುಂದರ್ ಕಪ್ಪೆಟ್ಟು, ರಮೇಶ್ ಪಾಲ್, ಗಣೇಶ್ ನೆರ್ಗಿ, ಮಂಜುನಾಥ್ ಗಿಳಿಯಾರು, ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ, ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರೆ, ಮಲ್ಪೆ ಅಧ್ಯಕ್ಷ ಕೃಷ್ಣ ಶ್ರೀಯಾನ್ ನೆರ್ಗಿ, ಮುಖಂಡ ರಾದ ಮಂಜುನಾಥ್ ಕಪ್ಪೆಟ್ಟು, ಸಂತೋಷ್ ಕಪ್ಪೆಟ್ಟು, ಭಗವನ್ ಮಲ್ಪೆ, ಶಶಿಕಲಾ ತೊಟ್ಟಂ, ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ಉದ್ಯಾವರ ನಾಗೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

‘ಯೋಗಿ ಅಲ್ಲ, ಮಾನಸಿಕ ರೋಗಿ’
ಆದಿತ್ಯನಾಥ್‌ರಲ್ಲಿ ಯೋಗಿಗಳಲ್ಲಿರುವ ಈ ನೆಲದ ಸಂಸ್ಕೃತಿಯನ್ನು ಕಾಪಾಡಿ ಕೊಂಡು ಹೋಗುವ ತಾಯಿತನದ ಗುಣ ಇಲ್ಲ. ಆದುದರಿಂದ ಅವರು ಯೋಗಿ ಅಲ್ಲ, ಮಾನಸಿಕ ರೋಗಿ ಆಗಿದ್ದಾರೆ ಎಂದು ಭಾಸ್ಕರ್ ಪ್ರಸಾದ್ ಟೀಕಿಸಿದರು.

52 ಕ್ರಿಮಿನಲ್ ಕೇಸುಗಳ ಆರೋಪಿಯಾಗಿರುವ ಯೋಗಿ, ದೇಶದ ದೊಡ್ಡ ರಾಜ್ಯದ ಮುಖ್ಯಯಮಂತ್ರಿಯಾಗಿರುವುದು ನಮ್ಮೆಲ್ಲರ ದೌರ್ಭಾಗ್ಯ. ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಸಂತ್ರಸ್ತೆಯ ದೇಹವನ್ನು ಸುಟ್ಟು ಹಾಕುವ ಮೂಲಕ ಪೊಲೀಸರು ಕಣ್ಣೆದುರೆ ಕಾನೂನಿನ ಕೊಲೆ ಮಾಡುವ ಕೃತ್ಯ ಎಸಗಿದ್ದಾರೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ