ಸುಪ್ರೀಂಕೋರ್ಟ್‌ನಲ್ಲಿ 4 ನ್ಯಾಯಾಧೀಶರ ಸ್ಥಾನ ಖಾಲಿ: 3 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಾಧೀಶರಿಲ್ಲ

Update: 2020-10-11 17:58 GMT

ಹೊಸದಿಲ್ಲಿ, ಅ.11: ಸುಪ್ರೀಂಕೋರ್ಟ್‌ನಲ್ಲಿ ನಾಲ್ವರು ನ್ಯಾಯಾಧೀಶರ ಹುದ್ದೆ ಖಾಲಿಯಿದ್ದು ಇದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂನ ಪ್ರಸ್ತಾವನೆಯನ್ನು ಎದುರು ನೋಡುತ್ತಿರುವುದಾಗಿ ಸರಕಾರದ ಮೂಲಗಳು ಹೇಳಿವೆ.

ಅಲ್ಲದೆ, ಗುವಾಹಟಿ, ಮಧ್ಯಪ್ರದೇಶ ಮತ್ತು ಉತ್ತರಾಖಂಡದ ಹೈಕೋರ್ಟ್‌ಗಳು ನಿಯಮಿತ(ಕ್ರಮಬದ್ಧ) ಮುಖ್ಯ ನ್ಯಾಯಾಧೀಶರಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ ಎಂದು ಕಾನೂನು ಇಲಾಖೆಯ ಮೂಲಗಳು ತಿಳಿಸಿವೆ. ಮುಖ್ಯ ನ್ಯಾಯಾಧೀಶ(ಸಿಜೆಐ)ರಾಗಿದ್ದ ರಂಜನ್ ಗೊಗೋಯ್ 2019ರ ನವೆಂಬರ್‌ನಲ್ಲಿ ನಿವೃತ್ತರಾಗಿದ್ದರೆ, ನ್ಯಾಯಾಧೀಶರಾದ ದೀಪಕ್ ಗುಪ್ತಾ, ಆರ್. ಭಾನುಮತಿ ಮತ್ತು ಅರುಣ್ ಮಿಶ್ರ ನಂತರ ನಿವೃತ್ತರಾಗಿದ್ದರೆ. ಸುಪ್ರೀಂಕೋರ್ಟ್‌ನಲ್ಲಿ 34 ನ್ಯಾಯಾಧೀಶರ ಹುದ್ದೆಗೆ ಮಂಜೂರಾತಿಯಿದ್ದು ಈಗ 30 ನ್ಯಾಯಾಧೀಶರಿದ್ದಾರೆ. ಹೈಕೋರ್ಟ್‌ಗಳ ದೈನಂದಿನ ಕಾರ್ಯಕಲಾಪ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಪ್ರಭಾರಿ ಮುಖ್ಯ ನ್ಯಾಯಾಧೀಶರಿಗೆ ಹೊಣೆ ವಹಿಸಲಾಗಿದೆ. ಈ ಸ್ಥಾನಗಳನ್ನು ಭರ್ತಿ ಮಾಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂನ ಪ್ರಸ್ತಾವನೆಯನ್ನು ಎದುರು ನೋಡಲಾಗುತ್ತಿದೆ. 25 ಹೈಕೋರ್ಟ್‌ಗಳ ಹಾಗೂ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಸಿಜೆಐ ಮತ್ತು ಸುಪ್ರೀಂಕೋರ್ಟ್‌ನ ನಾಲ್ಕು ಅತ್ಯಂತ ಹಿರಿಯ ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂಕೋರ್ಟ್‌ನ ಕೊಲಿಜಿಯಂ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಸರಕಾರಕ್ಕೆ ಕಳಿಸುತ್ತದೆ. ಈ ಹೆಸರನ್ನು ಸರಕಾರ ಪರಿಗಣಿಸಬಹುದು ಅಥವಾ ಕೊಲಿಜಿಯಂಗೆ ಹಿಂತಿರುಗಿಸಿ ಬೇರೆ ಹೆಸರನ್ನು ಪರಿಶೀಲಿಸಲು ಸೂಚಿಸಬಹುದು.

 ದೇಶದ 25 ಹೈಕೋರ್ಟ್‌ಗಳಲ್ಲಿ ಮಂಜೂರಾದ ಒಟ್ಟು ನ್ಯಾಯಾಧೀಶರ ಸಂಖ್ಯೆ 1,079. ಅಕ್ಟೋಬರ್ 1ರ ಪ್ರಕಾರ, 404 ಹೈಕೋರ್ಟ್ ನ್ಯಾಯಾಧೀಶರ ಹುದ್ದೆ ಖಾಲಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News