ಹಸಿವಿನ ಕೂಗಿಗೆ ಕಿವಿಯಾಗೋಣ!

Update: 2020-10-12 05:36 GMT

ಕೊರೋನದ ಸಂದರ್ಭದಲ್ಲಿ ವಿಶ್ವ ಹೆದರುತ್ತಿರುವುದು ಸೋಂಕಿನಿಂದ ಸಂಭವಿಸುತ್ತಿರುವ ಸಾವುಗಳ ಕುರಿತಂತೆ ಅಲ್ಲ. ಹಸಿವಿನಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ. ರೋಗ ಪ್ರಕೃತಿ ಸಹಜ ಎಂದು ಸ್ವೀಕರಿಸಬಹುದು. ಆದರೆ ವಿಶ್ವದಲ್ಲಿ ತಾಂಡವವಾಡುತ್ತಿರುವ ಹಸಿವು ಪ್ರಕೃತಿ ಸಹಜವಾದುದಲ್ಲ. ಇದು ಮನುಷ್ಯ ಸೃಷ್ಟಿ. ಆದುದರಿಂದ, ಹಸಿವಿನಿಂದ ಸಂಭವಿಸುವ ಸಾಲು ಸಾಲು ಸಾವುಗಳನ್ನು ಮನುಷ್ಯನಿಂದ ಸಂಭವಿಸುತ್ತಿರುವ ಹತ್ಯಾಕಾಂಡಗಳು ಎಂದೇ ಬಣ್ಣಿಸಬೇಕಾಗುತ್ತದೆ. ಕೊರೋನ ದಿನಗಳಲ್ಲಿ ಕೊಲೆಗಳ ಸಂಖ್ಯೆ ದುಪ್ಪಟ್ಟುಗೊಂಡಿವೆ. ಆದುದರಿಂದಲೇ ಈ ಬಾರಿ ನೊಬೆಲ್ ಶಾಂತಿ ಪುರಸ್ಕಾರ ವಿಶ್ವ ಆಹಾರ ಕಾರ್ಯಕ್ರಮಕ್ಕೆ ಸಂದಿದೆ. ಕೊರೋನ ವೈರಸ್ ಸಾಂಕ್ರಾಮಿಕ ರೋಗ ಕೋಟ್ಯಂತರ ಜನರನ್ನು ಹಸಿವಿನ ಕೂಪಕ್ಕೆ ತಳ್ಳಿದಾಗ ಯೆಮನ್‌ನಿಂದ ಉತ್ತರ ಕೊರಿಯದವರೆಗೆ ಜನರ ಹಸಿವನ್ನು ತಣಿಸಿದ ಮಹಾ ಕಾರ್ಯಕ್ರಮಕ್ಕಾಗಿ ಡಬ್ಲುಎಫ್‌ಪಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹೊಣೆಗಾರಿಕೆಗಳನ್ನು ಎತ್ತಿ ತೋರಿಸಲಾಗಿದೆ. ಮಂದಿರ, ಪ್ರತಿಮೆಗಳಂತಹ ಯೋಜನೆಗಳಿಗೆ ಹಣ ವ್ಯಯ ಮಾಡುವುದರ ಬದಲು, ಜನರ ಹಸಿವಿನ ಕಡೆಗೆ ಗಮನ ನೀಡಬೇಕು ಎನ್ನುವ ಸಂದೇಶವನ್ನು ನೀಡಿದೆ.

ಭಾರತದಲ್ಲಿ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆ ಕಳೆದ ಒಂದು ದಶಕದಿಂದ ಬೇರೆ ಬೇರೆ ಕಾರಣಗಳಿಗಾಗಿ ಹಿನ್ನಡೆ ಅನುಭವಿಸಿಕೊಂಡು ಬಂದಿದೆ. ಮುಖ್ಯವಾಗಿ ಬಡವರನ್ನು ಇಲ್ಲವಾಗಿಸಲು ‘ಬಡತನದ ಮಾನದಂಡ’ವನ್ನೇ ಬದಲಿಸಿತು. ಈ ಮೂಲಕ ಬಡವರು ಎಂದು ಗುರುತಿಸಲ್ಪಟ್ಟವರನ್ನು ಆ ರೇಖೆಯಿಂದ ಹೊರ ಹಾಕಿ ಬಡವರ ಸಂಖ್ಯೆಯನ್ನು ಇಳಿಕೆ ಮಾಡಿತು. ಆ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಹಣವನ್ನು ಉಳಿಸಿಕೊಂಡಿತು. ಸದ್ಯಕ್ಕೆ ಭಾರತದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕ ಪಿಡುಗಿಗೂ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ವೈಫಲ್ಯಕ್ಕೂ ನೇರ ಸಂಬಂಧವಿದೆ. ಉಚಿತ ಆಹಾರ ಧಾನ್ಯಗಳ ಅತ್ಯಧಿಕ ಅವಶ್ಯಕತೆ ಇರುವ ಕಡುಬಡತನದ ಕುಟುಂಬಗಳನ್ನು ಕೂಡಾ ಈ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆಯೆಂಬ ಕಳವಳಕಾರಿ ಸಂಗತಿಯನ್ನು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.ಈ ಅಧ್ಯಯನ ವರದಿಯು ಕಳೆದ ವಾರ ಬಯೋಮೆಡ್ ಸೆಂಟ್ರಲ್ ಸಂಸ್ಥೆಯು ಪ್ರಕಟಿಸುವ ನ್ಯೂಟ್ರಿಶನಲ್ ಜರ್ನಲ್ ನಿಯತಕಾಲಿಕದಲ್ಲಿ ಕಳೆದ ವಾರ ಪ್ರಕಟವಾಗಿತ್ತು.

ಈ ಅಧ್ಯಯನವು ತನ್ನ ವಿಶ್ಲೇಷಣೆಗೆ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-4 ದತ್ತಾಂಶವನ್ನು ತನ್ನ ವಿಶ್ಲೇಷಣೆಗೆ ಆಧಾರವಾಗಿ ಬಳಸಿಕೊಂಡಿತ್ತು ಹಾಗೂ ಪಡಿತರ ಆಹಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆಯುವುದಕ್ಕೆ ಅವಕಾಶ ಒದಗಿಸುವ ಬಿಪಿಎಲ್ ಕಾರ್ಡ್ ಗಳ ವಿತರಣೆಯಲ್ಲಿ ಅಸಮರ್ಪಕತೆ ಇರುವುದನ್ನು ಬಹಿರಂಗಪಡಿಸಿದೆ.

ಈ ಅಧ್ಯಯನ ವರದಿಯು ಅಂದಾಜು ಶೇ.15ರಷ್ಟು ಕುಟುಂಬಗಳನ್ನು ನೈಜ ಬಡವರು (ಆರ್ಥಿಕವಾಗಿ ದುರ್ಬಲರು ಹಾಗೂ ಸರಕಾರದ ವೆಲ್ಫೇರ್ ಕಾರ್ಡ್, ಬಿಪಿಎಲ್ ಕಾರ್ಡ್ ಅಥವಾ ಹಸಿರುಚೀಟಿ ಇತ್ಯಾದಿ ಹೊಂದಿರುವವರು) ಎಂಬುದಾಗಿ ಗುರುತಿಸಿದೆ. ಶೇ.16ರಷ್ಟು ಮಂದಿಯನ್ನು ಆರ್ಥಿಕವಾಗಿ ಬಡವರು. ಆದರೆ ಬಿಪಿಎಲ್ ಕಾರ್ಡ್ ಇಲ್ಲದೆ ಇರುವವರು ಎಂದು ಗುರುತಿಸಿದೆ. ಶೇ. 23 ಮಂದಿ ಆರ್ಥಿಕವಾಗಿ ದುರ್ಬಲರಲ್ಲ ಆದರೆ ವೆಲ್ಫೇರ್ ಕಾರ್ಡ್‌ಗಳನ್ನು ಹೊಂದಿರುವವರು ಮತ್ತು ಶೇ.46 ಮಂದಿಯನ್ನು ವೆಲ್ಫೇರ್ ಕಾರ್ಡ್‌ಗಳನ್ನು ಹೊಂದಿರುವ ಆರ್ಥಿಕವಾಗಿ ಬಡವರಲ್ಲದವರು ಎಂದು ಅಂದಾಜಿಸಿದೆ. ಒಟ್ಟು ಕುಟುಂಬಗಳ ಪೈಕಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಹೊಂದಿರುವ ಅಥವಾ ಹೊಂದದೆ ಇರುವ ಶೇ.57ರಷ್ಟು ಬಡಕುಟುಂಬಗಳು ಬೆಳವಣಿಗೆ ಕುಂಠಿತವಾಗಿರುವ ಕನಿಷ್ಠ ಒಂದು ಮಗುವನ್ನು ಹೊಂದಿವೆ ಹಾಗೂ ಬಡವರಲ್ಲದವರು ಎಂದು ಸರಕಾರ ಗುರುತಿಸಿದ ಕುಟುಂಬಗಳ ಪೈಕಿ ಶೇ.36ರಷ್ಟು ಕುಟುಂಬಗಳು ಕನಿಷ್ಠ ಒಂದು ಬೆಳವಣಿಗೆ ಕುಂಠಿತವಾಗಿರುವ ಮಗುವನ್ನು ಹೊಂದಿರುವುದಾಗಿ ಈ ಅಧ್ಯಯನ ವರದಿ ತಿಳಿಸಿದೆ. ಉತ್ತರಪ್ರದೇಶದಲ್ಲಿ ಶೇ. 27ರಷ್ಟು ಕುಟುಂಬಗಳು ಸಂಪನ್ಮೂಲಗಳಿಂದ ವಂಚಿತವಾಗಿವೆ ಹಾಗೂ ಅವು ಪಡಿತರ ಅಥವಾ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿಲ್ಲ. ಬಿಹಾರದಲ್ಲಿ ಈ ಪ್ರಮಾಣವು ಶೇ.15 ಹಾಗೂ ಜಾರ್ಖಂಡ್‌ನಲ್ಲಿ ಶೇ. 21 ಆಗಿದೆ. ಇದೇ ರೀತಿ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ದೊಡ್ಡ ಪ್ರಮಾಣದ ಬಡವರಲ್ಲದ ಕುಟುಂಬಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು ಕೂಡ ಕಂಡುಬಂದಿದೆ.

ಸಾರ್ವಜನಿಕ ವಿತರಣಾವ್ಯವಸ್ಥೆಯ ಮತ್ತು ಸಬ್ಸಿಡಿ ಸೌಲಭ್ಯದಿಂದ ಹೊರಗಿಡಲಾದ ಬಡ ಕುಟುಂಬಗಳಲ್ಲಿ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತ ಹಾಗೂ ಕಡಿಮೆ ದೇಹತೂಕದ ಸಮಸ್ಯೆ ಅಧಿಕವಾಗಿ ಕಂಡುಬಂದಿರುವುದಾಗಿಯೂ ಸಮೀಕ್ಷಾ ವರದಿಯು ತಿಳಿಸಿದೆ. ಹಲವಾರು ರಾಜ್ಯಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸಬ್ಸಿಡಿ ದರದ ಆಹಾರ ವ್ಯವಸ್ಥೆಯ ಸೌಲಭ್ಯದಿಂದ ವಂಚಿತವಾದ ಕುಟುಂಬಗಳಲ್ಲಿ ದೈಹಿಕ ಬೆಳವಣಿಗೆ ಕುಂಠಿತವಿರುವ ಮಕ್ಕಳ ಸಂಖ್ಯೆಯು ನಿಜವಾದ ಬಡಕುಟುಂಬಗಳಿಗಿಂತಲೂ ಅಧಿಕವಾಗಿದೆ ಎನ್ನುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಕಲ್ಯಾಣ ಯೋಜನೆಗಳ ಅತ್ಯಧಿಕ ಅವಶ್ಯಕತೆಯಿರುವ ಕಡುಬಡ ಕುಟುಂಬಗಳನ್ನು ಆ ಯೋಜನೆಗಳ ವ್ಯಾಪ್ತಿಗೆ ಒಳಪಡಿಸಲಾಗಿಲ್ಲವೆಂಬುದನ್ನು ಈ ಅಧ್ಯಯನ ವರದಿಯು ಅಭಿಪ್ರಾಯಿಸಿದೆ. ಬಡಕುಟುಂಬಗಳು ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗುವುದಕ್ಕೆ ಆದ್ಯತೆ ನೀಡಬೇಕು ಹಾಗೂ ಅವುಗಳಿಗೆ ಸಾರ್ವತ್ರಿಕವಾಗಿ ಆಹಾರದ ಲಭ್ಯತೆಯುಂಟಾಗುವಂತೆ ಮಾಡಲು ಅವನ್ನು ಕಲ್ಯಾಣ ಯೋಜನೆಗಳಲ್ಲಿ ಒಳಪಡಿಸಬೇಕು ಎಂದು ಶಿಫಾರಸು ಮಾಡಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪೌಷ್ಟಿಕ ಆಹಾರದ ಗುಣಮಟ್ಟವನ್ನು ಸುಧಾರಣೆಗೊಳಿಸುವ ಹಾಗೂ ಅಪೌಷ್ಟಿಕತೆಯನ್ನು ಕಡಿಮೆಗೊಳಿಸುವುದಕ್ಕೆ ನೆರವಾಗಲು ಆಹಾರದ ದಾಸ್ತಾನನ್ನು ವಿಸ್ತರಿಸುವ ಅಗತ್ಯವಿರುವುದಾಗಿಯೂ ವರದಿಯು ಪ್ರತಿಪಾದಿಸಿದೆ. ಸದ್ಯಕ್ಕೆ ಕೊರೋನ ದೇಶದಲ್ಲಿ ಅತಿ ಬಡವರು, ಬಡವರು ಮತ್ತು ಮಧ್ಯಮ ವರ್ಗದ ಜನರ ನಡುವಿನ ಅಂತರವನ್ನು ಇನ್ನಷ್ಟು ತೆಳುವಾಗಿಸಿದೆ. ಒಂದು ರೀತಿಯಲ್ಲಿ, ಸದ್ಯಕ್ಕೆ ಈ ಹಿಂದೆ ಮಧ್ಯಮ ವರ್ಗ ಎಂದು ಕರೆಯಲ್ಪಡುತ್ತಿದ್ದವರು, ಬಡವರ್ಗಕ್ಕೆ ಹಿಂಭಡ್ತಿ ಪಡೆದಿದ್ದಾರೆ. ಆದರೆ ಸರಕಾರದ ಅಂಕಿಅಂಶಗಳಲ್ಲಿ ಅವರು ಬಡವರೆಂದು ಗುರುತಿಸಲ್ಪಟ್ಟಿಲ್ಲ. ಕಾರ್ಡ್ ಹೊಂದಿಲ್ಲದ ಬಡವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ, ಬಡತನ ರೇಖೆಗಳಿಗಿಂತ ಕೆಳಗಿರುವವರು ಮಾತ್ರವಲ್ಲದೆ, ಬಡವರೆಂದು ಗುರುತಿಸಲ್ಪಡದ ‘ಬಡವ’ರನ್ನೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಒಳಗೊಳ್ಳುವಂತೆ ಮಾಡುವುದು ಕಾಲದ ಅಗತ್ಯವಾಗಿದೆ. ಕೊರೋನಾವನ್ನು ಗೆಲ್ಲುವುದು ಎಂದರೆ ಹಸಿವನ್ನು ಗೆಲ್ಲುವುದು ಕೂಡ ಎನ್ನುವ ಸತ್ಯವನ್ನು ಸರಕಾರ ಒಪ್ಪಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News