ಭಾರತೀಯ ವೈದ್ಯನ ಜನ್ಮ ದಿನ ಆಚರಿಸಿದ ಚೀನಾ: ಇವರು ಯಾರು ಗೊತ್ತಾ?
Update: 2020-10-12 23:03 IST
ಬೀಜಿಂಗ್, ಅ. 12: ಚೀನಾ ರವಿವಾರ ಭಾರತೀಯ ವೈದ್ಯ ದ್ವಾರಕಾನಾಥ ಕೊಟ್ನಿಸ್‌ರ 110ನೇ ಹುಟ್ಟಿದ ದಿನವನ್ನು ಆಚರಿಸಿತು. ಮಾವೊ ಝೆಡಾಂಗ್ ನೇತೃತ್ವದ ಚೀನಾ ಕ್ರಾಂತಿ ಮತ್ತು ಎರಡನೇ ಮಹಾಯುದ್ಧದ ಅವಧಿಯಲ್ಲಿ ಕೊಟ್ನಿಸ್ ಚೀನಾದಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರದ ನಿವಾಸಿಯಾಗಿದ್ದ ಡಾ. ಕೊಟ್ನಿಸ್ 1938ರಲ್ಲಿ ಚೀನಾಕ್ಕೆ ಆಗಮಿಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಚೀನೀಯರಿಗೆ ನೆರವಾಗುವುದಕ್ಕಾಗಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಚೀನಾಕ್ಕೆ ಕಳುಹಿಸಿದ ಐವರು ವೈದ್ಯರ ತಂಡದ ಸದಸ್ಯರಾಗಿದ್ದರು.
ಅವರು 1942ರಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು. ಆದರೆ, ಅದೇ ವರ್ಷ ತನ್ನ 32ನೇ ವಯಸ್ಸಿನಲ್ಲಿ ಅವರು ನಿಧನರಾದರು.
ಅವರ ಹುಟ್ಟಿದ ದಿನದ ಸಂದರ್ಭದಲ್ಲಿ ಚೀನಾ ಸರಕಾರದ ಸಂಸ್ಥೆಯಾಗಿರುವ ಚೈನೀಸ್ ಪೀಪಲ್ಸ್ ಅಸೋಸಿಯೇಶನ್ ಫಾರ್ ಫ್ರೆಂಡ್‌ಶಿಪ್ ವಿದ್ ಫಾರೀನ್ ಕಂಟ್ರೀಸ್ ಆನ್‌ಲೈನ್ ಸ್ಮರಣಾ ಕಾರ್ಯಕ್ರಮವೊಂದನ್ನು ಏರ್ಪಡಿಸಿತು.