×
Ad

ಭಾರತದ ಜಿಡಿಪಿಯಲ್ಲಿ ದಾಖಲೆ ಮಟ್ಟದ ಕುಸಿತ: ಐಎಂಎಫ್ ಮುನ್ಸೂಚನೆ

Update: 2020-10-13 23:20 IST

ಹೊಸದಿಲ್ಲಿ, ಅ.13: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ 2021ರ ಮಾರ್ಚ್ 31ಕ್ಕೆ ಅಂತ್ಯವಾಗುವ ವರ್ಷದಲ್ಲಿ ಭಾರತದ ಜಿಡಿಪಿ 10.3 ಶೇ. ದಷ್ಟು ಭಾರೀ ಕುಸಿತವಾಗಲಿದೆ ಎಂದು ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮಂಗಳವಾರ ಹೇಳಿದ್ದು, ಸ್ವಾತಂತ್ರ್ಯದ ಬಳಿಕದ ಅತ್ಯಂತ ಕಳಪೆ ಅಭಿವೃದ್ಧಿ ದರ ಮತ್ತು ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಜಿಡಿಪಿಯಲ್ಲಿ ಅತೀ ದೊಡ್ಡ ಕುಸಿತ ಇದಾಗಿದೆ.

ಭಾರತದ ಜಿಡಿಪಿ 1.9 ಶೇ. ಅಭಿವೃದ್ಧಿಯಾಗಲಿದೆ ಎಂದು ಎಪ್ರಿಲ್‌ನಲ್ಲಿ ಐಎಂಎಫ್ ಅಂದಾಜು ಮಾಡಿತ್ತು. ಬಳಿಕ ಜೂನ್‌ನಲ್ಲಿ ಇದನ್ನು ಪರಿಷ್ಕರಿಸಿ, ಜಿಡಿಪಿಯಲ್ಲಿ 4.5ರಷ್ಟು ಕುಸಿತವಾಗಲಿದೆ ಎಂದು ಅಂದಾಜಿಸಿತ್ತು. ಅಭಿವೃದ್ಧಿಶೀಲ ರಾಷ್ಟ್ರಗಳಾದ ಇಟಲಿ ಮತ್ತು ಸ್ಪೇನ್ ಬಳಿಕದ ಅತ್ಯಂತ ಬೃಹತ್ ಜಿಡಿಪಿ ಕುಸಿತವನ್ನು ಭಾರತ ದಾಖಲಿಸಲಿದೆ ಎಂದು ಐಎಂಎಫ್ ಭವಿಷ್ಯ ನುಡಿದಿದೆ. ಬ್ರಿಕ್ಸ್ ಗುಂಪಿನ ರಾಷ್ಟ್ರಗಳಲ್ಲಿ ಬ್ರೆಝಿಲ್‌ನ ಜಿಡಿಪಿ 5.8 ಶೇ., ರಶ್ಯಾದ ಜಿಡಿಪಿ 4.1 ಶೇ., ದಕ್ಷಿಣ ಆಫ್ರಿಕಾದ ಜಿಡಿಪಿ 8 ಶೇ. ಕುಸಿತ ಕಾಣಲಿದೆ. ಆದರೆ ಚೀನಾದ ಜಿಡಿಪಿ 1.9 ಶೇ. ಅಭಿವೃದ್ಧಿಯಾಗಲಿದೆ ಎಂದು ಐಎಂಎಫ್ ವರದಿ ಮಾಡಿದೆ. ಕೊರೋನ ಸೋಂಕಿನ ಸಮಸ್ಯೆಗೂ ಮೊದಲೇ ಏಶ್ಯಾದ ಮೂರನೇ ಬೃಹತ್ ಅರ್ಥವ್ಯವಸ್ಥೆ ಎನಿಸಿರುವ ಭಾರತದ ಜಿಡಿಪಿ ವೇಗೋತ್ಕರ್ಷ ಪಡೆಯಲು ಹೆಣಗಾಡುತ್ತಿತ್ತು.

ಕೊರೋನದಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಯ ಮೇಲೆ ಮಾರಕ ಪ್ರಹಾರ ಎದುರಾಗಿತ್ತಲ್ಲದೆ, ಕೊರೋನ ಸೋಂಕಿನ ನಿಯಂತ್ರಣಕ್ಕೆ ಭಾರತವು ವಿಶ್ವದಲ್ಲೇ ಅತ್ಯಂತ ಕಠಿಣ ಲಾಕ್‌ಡೌನ್ ಜಾರಿಗೆ ನಿರ್ಧರಿಸಿದ್ದು ದೇಶದ ಅರ್ಥವ್ಯವಸ್ಥೆಗೆ ಭಾರೀ ಹೊಡೆತ ನೀಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News