ಆಹಾ! ರಸಾಯನ!

Update: 2020-10-13 19:30 GMT

ಪ್ರಾಥಮಿಕ ಶಾಲೆ ದಾಟಿ ಪ್ರೌಢಶಾಲೆಗೆ ಬಂದಾಗ ರಸಾಯನ ಶಾಸ್ತ್ರ ಅನ್ನುವ ವಿಷಯ ನೋಡಿ ಅರರೆ! ನಂಗೆ ಪ್ರಿಯವಾದ ರಸಾಯನದ ಬಗ್ಗೆ ಒಂದು ಶಾಸ್ತ್ರವೇ ಇದೆಯಲ್ಲಪ್ಪ.. ಆಹಾ! ಎಂದು ಜೊಲ್ಲು ಸುರಿಸಿದ್ದೆ. ಆದರೆ ಪಠ್ಯಪುಸ್ತಕ ಕೈಗೆ ಹಿಡಿದಾಗಲೇ ತಿಳಿದಿದ್ದು ಅದು ಬೇರೆಯದೇ ರಸಾಯನಶಾಸ್ತ್ರ ಅಂತ. 80ರ ದಶಕದ ಕೊನೆಯಲ್ಲಿ ಹುಟ್ಟಿದ ಮಕ್ಕಳು ಒಂದು ಸಂಧಿಕಾಲದ ಕೂಸುಗಳು. ಹೊಸ ಬದಲಾವಣೆಗಳು ಆಗಷ್ಟೆ ಆರಂಭವಾಗಿದ್ದವು. ಕೆಲವೇ ವರ್ಷಗಳಲ್ಲಿ ಉಪಖಂಡವು ಜಾಗತಿಕ ಮಾರುಕಟ್ಟೆಗೆ ಮುಕ್ತವಾಗಿ ತೆರೆದುಕೊಂಡಿತು. ಜಾಗತೀಕರಣವು ಕೇವಲ ಮಾರುಕಟ್ಟೆಯನ್ನು ಮಾತ್ರ ಒಳಗೊಳ್ಳಲಿಲ್ಲ. ದೇಸೀಯ ಆಹಾರ ಸಂಸ್ಕೃತಿಯ ಮೇಲೆ ಕೂಡ ಅಗಾಧವಾಗಿ ಪರಿಣಾಮ ಬೀರಿತು. ಅಂತಹ ಪರಿಣಾಮವನ್ನು ನಾವಿಂದು ಹಳ್ಳಿ ಹಳ್ಳಿಗಳಲ್ಲಿ ಕೂಡ ಕಾಣುತ್ತಿದ್ದೇವೆ. ನಮ್ಮ ಹಳೆಯ ವಿನ್ಯಾಸ ಟೀ ಹೊಟೇಲ್‌ಗಳು, ಅಲ್ಲಿ ಕರಿಯುತ್ತಿದ್ದ ಬೋಂಡ ಬಜ್ಜಿಗಳು, ಇಡ್ಲಿ ದೋಸೆಯ ಹೊಟೇಲ್‌ಗಳು ಎಲ್ಲ ಈಗ ಹೊಸ ರೂಪ ಎತ್ತಿವೆ. ಟೀ ಬದಲಿಗೆ ಹತ್ತಾರು ಪಾನೀಯಗಳಿವೆ. ಬೋಂಡ ಬಜ್ಜಿಗಳ ಅಂಗಡಿಗಳು ಕಣ್ಮರೆಯಾಗಿ ಗೋಬಿ-ಪಾನಿಪುರಿ ಅಂಗಡಿಗಳು ಬಂದಿವೆ. ಇನ್ನು ಮನೆಯ ಮಟ್ಟದಲ್ಲಿ ನೋಡುವುದಾದರೆ ಅಲ್ಲೂ ಕೂಡ ಬದಲಾವಣೆಗಳು ಶಾವಿಗೆಗಿಂತ ಹೆಚ್ಚಾಗಿ ನೂಡಲ್ಸ್, ಪಾಸ್ತಾಗಳೇ ಬಳಕೆಯಾಗುತ್ತಿವೆ.

ಬದಲಾವಣೆ ಬದುಕಿನ ಸಾಮಾನ್ಯ ಸಂಗತಿ, ಆದರೆ ಹೇರಿಕೆಯ ಬದಲಾವಣೆ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ತಲೆ ಬೆನ್ನಿನ ಮೇಲೆ ಸವಾರಿ ಹೋಗುತ್ತಿದೆ. ನಾವು ಅದರ ಅರಿವಿಲ್ಲದೆ ನಾಗಾಲೋಟದಲ್ಲಿ ಸಾಗುತ್ತಿದ್ದೇವೆ. ಇಂತಹ ಸಮಯದಲ್ಲಿ ‘ರಸಾಯನ’ ನೆನಪಾಗುತ್ತಿದೆ. ರಸಾಯನ ಅಂದರೆ ಹಣ್ಣುಗಳಿಗೆ ಸಿಹಿಯನ್ನು ಸೇರಿಸಿದ ಮಿಶ್ರಣ. ಇದಕ್ಕೆ ಅಗತ್ಯವಾದ ಹೂವು, ಪತ್ರೆ, ಸುಗಂಧಿತ ಬೇರು, ಪುಡಿ ಏನೆಲ್ಲಾ ಕೂಡ ಬೆರೆಸಿ ಅದರ ರುಚಿ, ಬಣ್ಣ, ಘಮವನ್ನು ವೈವಿಧ್ಯಮಯಗೊಳಿಸಬಹುದು. ಇಂತಹದೊಂದು ರಸಾಯನ ಮನುಷ್ಯನ ಆದಿಮ ಕಾಲದ ಆಹಾರದ ಸಂಗಾತಿಯೇ ಆಗಿರಬಹುದು. ಯಾಕೆಂದರೆ ರಸಾಯನಕ್ಕೆ ಸೀಮಿತ ಪದಾರ್ಥಗಳ ರೆಸಿಪಿ ಇಲ್ಲ. ಅದನ್ನು ರುಚಿಗೆ ತಕ್ಕಂತೆ, ಸಿಗುವ ಪದಾರ್ಥಗಳಿಗೆ ತಕ್ಕಂತೆ ರೂಪಿಸುತ್ತಾ ಹೋಗಬಹುದು. ಅಲ್ಲದೆ ಗಟ್ಟಿಯಾದ ಘನ (ಸಲಾಡ್) ಮತ್ತು ತೆಳುವಾದ ದ್ರವ (ಲಿಕ್ವಿಡ್) ರೂಪದಲ್ಲಿ ಕೂಡ ತಯಾರಿಸಬಹುದು. ರಸಾಯನದ ಎಲ್ಲ ಪದಾರ್ಥಗಳು ಹೆಚ್ಚಾಗಿ ಹಸಿಯಾಗಿಯೇ ಇರುತ್ತವೆ. ಕೆಲವಕ್ಕೆ ಮಾತ್ರ ಬೇಯಿಸಿದ ಪದಾರ್ಥಗಳನ್ನು ಬಳಸುತ್ತಾರೆ. ಹಸಿ ಮತ್ತು ಬೇಯಿಸಿದ ಪದಾರ್ಥಗಳನ್ನು ನಮ್ಮ ರುಚಿಯ ಕಲಾವಂತಿಕೆೆಗೆ ತಕ್ಕಂತೆ ವಿಸ್ತರಿಸಿಕೊಳ್ಳುತ್ತಾ ಹೋಗಬಹುದು. ಇಂತಹದೊಂದು ಪ್ರಾಚೀನ ವಿಸ್ತರಣೆಯನ್ನು ಕನ್ನಡದ ಮಂಗರಸ ಕವಿಯ ‘ಸೂಪಶಾಸ್ತ್ರ’ ಕೃತಿಯಲ್ಲಿ ಕಾಣಬಹುದು.

ಒಂದು ಪಡಿ ಸಕ್ಕರೆಯ ನಾಲ್ಕುಪಡಿ ನೀರನೆರಿ ದೊಂದು ಸೆರೆ ನಿಂಬೆಹುಳಿವೊಂದು ಸೆರೆ ಸಿಹಿಮೊಸರ ನೊಂದಿಸಿದ ಬಳಿಕ ಪಳಗಿದ ಮಡಕೆಯೊಳಗಿಕ್ಕಿ ಒಲೆಗೆತ್ತಿ ಕಿಚ್ಚುನುರುಹಿ ಒಂದು ಕುದಿಗೊಂದು ಪಡಿಯುಮನೆರಡು ಕುದಿಗೆ ಮ ತ್ತೊಂದು ಪಡಿಯಂ ಮೂರನೆಯ ಕಡೆಯ ಕುದಿಗೆ ಮ ತ್ತೊಂದು ಪಡಿಯಂ ತೆಗೆವುದಾ ಮಿಕ್ಕುದತಿ ಮಂದಮಾಗಿ ರಂಜಿಸುತಿರ್ಪುದು ಇಲ್ಲಿ ಮಂಗರಸ ಸಕ್ಕರೆಯ ಜೊತೆಗೆ ನಿಂಬೆ ಹುಳಿ ಬೆರೆಸಿ ಅದಕ್ಕೆ ಸಿಹಿ ಮೊಸರನ್ನು ಕೂಡಿಸಿ ಕುದಿಸಿ ಕುದಿಸಿ ಕೊಸರು ತೆಗೆದು ಕಡೆಯಲ್ಲಿ ಉಳಿಯುವ ಗಟ್ಟಿ ದ್ರವರೂಪ ರಸಾಯನವನ್ನು ವಿವರಿಸಿದ್ದಾನೆ. ಇಂತಹವು ನಿಜವಾಗಲೂ ಬಳಕೆಯಲ್ಲಿ ಇದ್ದುವೋ ಅಥವಾ ಇವು ಅರಸನ ಕಲ್ಪನೆಯ ರಸಾಯನಗಳೋ ತಿಳಿಯದು. ಕೆಲವು ಇವತ್ತಿನ ಅತಿರೇಕದ ಪ್ರಯೋಗಗಳು ಅನಿಸುತ್ತವೆ. ಯಾಕೆಂದರೆ 400 ವರ್ಷಗಳಲ್ಲಿ ನಮ್ಮ ಆಹಾರ ಸಾಕಷ್ಟು ಬದಲಾವಣೆಗೆ ಒಳಪಟ್ಟಿದೆಯಲ್ಲ. ಬಾಳೆಹಣ್ಣಿನ ರಸಾಯನವೇ ರಸಾಯನಗಳಲ್ಲಿ ಅಗ್ರಪಂಕ್ತೀಯವಾದದ್ದು ಮತ್ತು ಬಹುತೇಕರಿಗೆ ಗೊತ್ತಿರುವುದು ಅದೊಂದೇ ರಸಾಯನ ಕೂಡ.

ಹಬ್ಬಗಳು ಬಂತು ಅಂದರೆ ದೇವಸ್ಥಾನಗಳಲ್ಲಿ ಚರ್ಪು ಅರ್ಥಾತ್ ರಸಾಯನ ಗ್ಯಾರಂಟಿ ಇರುತ್ತಿತ್ತು. ಬಾಳೆಹಣ್ಣು ಸುಲಿದು ಸಣ್ಣಗೆ ಕತ್ತರಿಸಿ ಅದಕ್ಕೆ ಪುಡಿ ಬೆಲ್ಲ, ತೆಂಗಿನ ತುರಿ, ಏಲಕ್ಕಿ ಪುಡಿ ಸೇರಿಸಿ ಕಲಸಿ ಇತ್ತ ಹತ್ತು ಹದಿನೈದು ನಿಮಿಷಗಳಲ್ಲಿ ಬೆಲ್ಲ ಕರಗಿ ಹಣ್ಣು ಮತ್ತು ತೆಂಗಿನ ತುರಿ ಜೊತೆಗೆ ಬೆರೆತು ಹದವಾಗಿರೋದು. ಬಾಳೆಲೆ ಅಥವಾ ಮುತ್ತುಗದ ಎಲೆಯಲ್ಲಿ ಒಂದೊಂದು ತುತ್ತಿನಷ್ಟು ಪ್ರಸಾದವನ್ನು ಸರದಿಯ ನುಗ್ಗಾಟದಲ್ಲೂ ಪಡೆದುಕೊಂಡು ತಿನ್ನುವುದು ಒಂದು ಯುದ್ಧವನ್ನು ಜಯಸಿದಷ್ಟೇ ಸಂತೋಷವನ್ನು ಕೊಡುತ್ತಿತ್ತು. ಇನ್ನು ಮನೆಗಳಲ್ಲಿ ಹಬ್ಬದ ಪೂಜೆ ಮುಗಿದ ಮಾರನೆಯ ದಿನ ಪೂಜೆಗೆ ತಂದಿದ್ದ ಬಾಳೆಹಣ್ಣುಗಳನ್ನು ಸುಲಿದು ಯಥಾವತ್ ಬೆಲ್ಲ, ತೆಂಗಿನ ತುರಿ, ಏಲಕ್ಕಿ, ಜೇನುತುಪ್ಪ, ಕಲ್ಲುಸಕ್ಕರೆ ಹಾಕಿ ಕಲಸಿ ಅದಕ್ಕೆ ಅವಲಕ್ಕಿ ಅಥವಾ ಕಡ್ಲೆಪುರಿ (ಮಂಡಕ್ಕಿ) ಸೇರಿಸಿ ಸಿದ್ಧ ಮಾಡುತ್ತಿದ್ದರು. ಇಲ್ಲವಾದರೆ ತುಂಬು ಸಂಸಾರದ ಜನರಿಗೆ ಅಲ್ಲಿ ಮಾಡಿದ ರಸಾಯನ ಸಾಕಾಗುತ್ತಿರಲಿಲ್ಲ. ಅದಕ್ಕಾಗಿಯೇ ಈ ಅವಲಕ್ಕಿ ಮತ್ತು ಮಂಡಕ್ಕಿ ಮಿಶ್ರಣ. ಹಲಸಿನ ಹಣ್ಣಿನ ಕಾಲವಾಗಿದ್ದರೆ ಅದೂ ಕೂಡ ಈ ಬಾಳೆಹಣ್ಣಿನ ರಸಾಯನದಲ್ಲಿ ಸಮ ಪಾಲು ಪಡೆಯುತ್ತದೆ. ಅದರ ರುಚಿ ಇಮ್ಮಡಿಸುತ್ತದೆ. ರಸಾಯನದ ಮಿಶ್ರಣಕ್ಕೆ ಹಲಸು ಹೇಳಿ ಮಾಡಿಸಿದ ಜೋಡಿ. ಇದಕ್ಕೆ ಮಂಡಕ್ಕಿ, ಅವಲಕ್ಕಿಯ ಸಹವಾಸ ಮಾಡಿಸಲೇಬಾರದು. ಸುಲಿದ ಬಾಳೆಹಣ್ಣು, ಬೆಲ್ಲ ಅಥವಾ ಜೇನುತುಪ್ಪ, ತೆಂಗಿನ ತುರಿ, ಹಲಸಿನ ತೊಳೆಯ ಎಳೆಗಳನ್ನು ಕಲಸಿ ಹತ್ತು ನಿಮಿಷ ಬಿಟ್ಟು ತಿನ್ನಲು ಕೈ ಇಟ್ಟರೆ ಮೂತಿ ಎಲ್ಲಾ ಅಂಟುವಷ್ಟು ಮುಕ್ಕುವುದು ಖಾತ್ರಿ.

ಇನ್ನು ಕಜ್ಜಾಯದ ರಸಾಯನ ಕೂಡ ಬಹಳ ಚೆಂದ. ಈಗಾಗಲೇ ಮಾಡಿಕೊಂಡಿರುವ ಕಜ್ಜಾಯವನ್ನು ಬಿಡಿಬಿಡಿಯಾಗಿ ಕೈಯಲ್ಲಿ ಕತ್ತರಿಸಿ, ಅದನ್ನು ಬಾಳೆಹಣ್ಣು, ಬೆಲ್ಲ ಅಥವಾ ಜೇನುತುಪ್ಪ, ಒಣದ್ರಾಕ್ಷಿ, ಗೋಡಂಬಿಯ ಜೊತೆಗೆ ಕಾಯಿಸಿದ ಹಾಲು ಸೇರಿಸಿ ಐದು ನಿಮಿಷ ನೆನೆಸಿ ತಿಂದರೆ ಕಜ್ಜಾಯ ಹಣ್ಣು ಸಿಗುತ್ತವೆ, ಕುಡಿಯಲು ಬೆಲ್ಲ ಕರಗಿದ ಹಾಲು ಸಿಗುತ್ತದೆ. ಬಾಳೆಹಣ್ಣು ಬಿಟ್ಟರೆ ಕಲ್ಲಂಗಡಿ, ಖರಬೂಜ ಹಣ್ಣುಗಳಲ್ಲಿ ಮಾಡಬಹುದು. ಆದರೆ ಇವಕ್ಕೆ ತೆಂಗಿನ ತುರಿ ಬಳಸುವುದು ಅಷ್ಟಾಗಿ ಹೊಂದುವುದಿಲ್ಲ ಮತ್ತು ಇದನ್ನು ದ್ರವ ರೂಪದ ರಸಾಯನವಾಗಿ ಮಾಡಬಹುದು, ಹಣ್ಣು ಸುಲಿದು ಸಣ್ಣಗೆ ಹಚ್ಚಿ ಅದಕ್ಕೆ ಬೆಲ್ಲದ ಪುಡಿ /ಸಕ್ಕರೆ ಯಾಲಕ್ಕಿ ಹಾಕಿ ನೀರು ಸೇರಿಸದೆ ರುಬ್ಬಿದರೆ ರಸಾಯನ ಸಿದ್ಧ್ದ. ಬೇಕಿದ್ದರೆ ಪುದೀನ ಎಲೆ ಸೇರಿಸಬಹುದು.

ಹೀಗೆಯೇ ಅನಾನಸ್, ಮಾವಿನ ಹಣ್ಣಿನ ರಸಾಯನ ಮಾಡಬಹುದು ಅಥವಾ ಸೀಕರಣೆ ಅನ್ನುವುದು ಕೂಡ ರಸಾಯನದ ಒಂದು ವಿಧವೇ ಆಗಿದೆ. ಆದಾಗ್ಯೂ ಹಬ್ಬಗಳಲ್ಲಿ ಬಯಲುಸೀಮೆಯ ದೇವಸ್ಥಾನಗಳು ಮತ್ತು ಮನೆಗಳಲ್ಲಿ ರಸಾಯನ ಜೊತೆಗೆ ಬಿಡದ ನಂಟು. ಚರ್ಪು ತಿನ್ನದ ಹಬ್ಬ ಹಬ್ಬವೇ ಆಗಿರಲಿಲ್ಲ. ಈಗಲೂ ಚರ್ಪು ಬಳಕೆಯಲ್ಲಿದೆ. ಪೂರ್ತಿ ಬಿಟ್ಟುಹೋಗಿಲ್ಲ. ಆದರೆ ನನಗೆ ಮಾತ್ರ ಹಲಸು ಕಂಡಾಗಲೆಲ್ಲಾ ರಸಾಯನ ಮಾಡಿ ತಿನ್ನಬೇಕು ಅನ್ನಿಸುತ್ತದೆ. ಅದರ ಜೊತೆಗೆ ಹೋಳಿಗೆಯ ಹೂರಣ ಬಿದ್ದುಬಿಟ್ಟರೆ ಅವತ್ತಿನ ದಿನವೆಲ್ಲಾ ಊಟವೇ ಬೇಡ. ಯುಗಾದಿ ಹಬ್ಬದ ದಿನ ಇಂತಹ ಸಿಹಿ ರಸಾಯನ ಇದ್ದೇ ಇರುತ್ತದೆ. ಮಂಗರಸನು ಪ್ರಸ್ತಾಪಿಸಿರುವ ಹತ್ತಾರು ಬಗೆಯ ರಸಾಯನಗಳನ್ನು ಒಂದೊಂದಾಗಿ ಪ್ರಯೋಗಿಸಿ ನೋಡಬೇಕು. ಅವುಗಳಲ್ಲಿ ಕೆಲವಾದರೂ ಇಂದಿನ ನಮ್ಮ ರುಚಿಗೆ ಹೊಂದಿಕೊಂಡರೆ ಮತ್ತೆ ಇವತ್ತಿನ ಪ್ರಪಂಚಕ್ಕೆ ರಸಾಯನದ ಪುನರಾವತಾರವನ್ನು ಪರಿಚಯಿಸಬಹುದು 

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News