×
Ad

ಬಿಹಾರ ಚುನಾವಣೆ: ಶತ್ರುಘ್ನ ಸಿನ್ಹಾ ಪುತ್ರ ಲವ ಕೈ ಅಭ್ಯರ್ಥಿಯಾಗಿ ಕಣಕ್ಕೆ

Update: 2020-10-14 21:41 IST

ಪಾಟ್ನಾ, ಅ.15: ಮಾಜಿ ಕೇಂದ್ರ ಸಚಿವ ಹಾಗೂ ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ ಸಿನ್ಹಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಚೊಚ್ಚಲ ಪ್ರವೇಶ ಮಾಡಿದ್ದಾರೆ.

37 ವರ್ಷ ವಯಸ್ಸಿನ ಲವ ಅವರನ್ನು ಬಂಕಿಪೋರಾ ಅಸೆಂಬ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಕಣಕ್ಕಿಳಿಸಲಿದೆ. ಬಂಕಿಪೋರಾ ಕ್ಷೇತ್ರವು ಲವ ಅವರ ತಂದೆ ಶತ್ರುಘ್ನ ಸಿನ್ಹಾ 2009 ಹಾಗೂ 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ಪಟ್ನಾಸಾಹಿಬ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

2010ರಲ್ಲಿ ತೆರೆಕಂಡ ಸಾದಿಯಾನ್ ಚಿತ್ರದ ನಾಯಕನಾಗಿ ನಟಿಸುವ ಮೂಲಕ ಲವ ಅವರು ಬಾಲಿವುಡ್ ಪ್ರವೇಶಿಸಿದ್ದರು. 2018ರಲ್ಲಿ ಬಿಡುಗಡೆಯಾದ ಜೆ.ಪಿ.ದತ್ತಾ ನಿರ್ದೇಶನದ ಯುದ್ಧದ ಕಥಾವಸ್ತುವಿನ ಚಿತ್ರ ಪಾಲ್ನಾನ್ ಅವರ ಅಭಿನಯದ ಕೊನೆಯ ಚಿತ್ರವಾಗಿದೆ.

ಚುನಾವಣಾ ಕಣದಲ್ಲಿ ಲವ ಅವರು, ಮೂರು ಬಾರಿ ಶಾಸಕರಾಗಿರುವ ಬಿಜೆಪಿ ಅಭ್ಯರ್ಥಿ ನಿತಿನ್ ನವೀನ್ ಅವರನ್ನು ಎದುರಿಸಲಿದ್ದಾರೆ. ಈ ನಡುವೆ ಪ್ಲೂರಲ್ಸ್ ಪಕ್ಷದ ಸ್ಥಾಪಕಿ ಪುಷ್ಪಂ ಪ್ರಿಯಾ ಚೌಧುರಿ ಕೂಡಾ ಬಂಕಿಪೋರಾದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಶತ್ರುಘ್ನ ಸಿನ್ಹಾ ಅವರಿಗೆ ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ, ಪಕ್ಷ ತೊರೆದ ಅವರು ಪಟ್ನಾ ಸಾಹೀಬ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಆದರೆ ಚುನಾವಣೆಯಲ್ಲಿ ಅವರು ಹಾಲಿ ಕೇಂದ್ರ ಸಚಿವ ರವಿಶಂಕರ್ ಎದುರು ಸೋಲುಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News