ಅರ್ನಬ್ ವಿರುದ್ಧ 200 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿಗೊಳಿಸಿದ ಸುಶಾಂತ್ ಸಿಂಗ್ ಸ್ನೇಹಿತ

Update: 2020-10-15 05:30 GMT
ಅರ್ನಬ್ ಗೋಸ್ವಾಮಿ

ಮುಂಬೈ : ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಸಮಸ್ಯೆಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ನಟ ಸುಶಾಂತ್ ಸಿಂಗ್ ರಾಜಪುತ್ ಅವರ ಸ್ನೇಹಿತ ಹಾಗೂ ಚಿತ್ರ ತಯಾರಕ ಸಂದೀಪ್ ಸಿಂಗ್ ಅವರು ರೂ. 200 ಕೋಟಿ ಪರಿಹಾರ ಕೋರಿ ಅರ್ನಬ್ ಗೋಸ್ವಾಮಿಗೆ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ. ಅರ್ನಬ್ ಅವರ ಸಹೋದ್ಯೋಗಿಗಳು ತಮ್ಮಿಂದ ಹಣ ವಸೂಲಿ ಮಾಡಲು  "ಕ್ರಿಮಿನಲ್ ಉದ್ದೇಶ''ದಿಂದ ಸಂದೇಶಗಳನ್ನು ಕಳುಹಿಸಿದ್ದರು ಎಂದು ಸಿಂಗ್ ಅವರು ತಮ್ಮ ಕಾನೂನು ನೋಟಿಸಿನಲ್ಲಿ ಆರೋಪಿಸಿದ್ದಾರೆ. ಈ ಕಾನೂನು ನೋಟಿಸನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲೂ ಶೇರ್ ಮಾಡಿದ್ದು ಇದೀಗ ಗೋಸ್ವಾಮಿ ಮತ್ತವರ ಟಿವಿ ವಾಹಿನಿಗೆ ಮಾಡಿದ ತಪ್ಪಿಗೆ ಬೆಲೆ ತೆರುವ ಸಮಯ (ಪೇಬ್ಯಾಕ್ ಟೈಮ್) ಎಂದೂ ಅದರಲ್ಲಿ ಅವರು ಹೇಳಿದ್ದಾರೆ.

"ತಮ್ಮ ವಿರುದ್ಧ ದುರದ್ದೇಶಪೂರಿತ ಟ್ವೀಟ್‍ಗಳನ್ನು ಪ್ರಸಾರ ಮಾಡಿ ಹಾಗೂ ತಮ್ಮಿಂದ ಹಣ ವಸೂಲಿ ಮಾಡುವ ಹಾಗೂ ಟಿಆರ್‍ಪಿ ಹೆಚ್ಚಿಸುವ ಉದ್ದೇಶದಿಂದ ತನಗೆ ಕಳಂಕ ತರುವ ಯತ್ನವನ್ನು ರಿಪಬ್ಲಿಕ್ ಟಿವಿ ಮಾಡಿದೆ,'' ಎಂದು ಅರ್ನಬ್‍ಗೆ ನೀಡಿದ ಕಾನೂನು ನೋಟಿಸಿನಲ್ಲಿ ಸಿಂಗ್ ತಿಳಿಸಿದ್ದಾರೆ. ತಮ್ಮ ಟಿವಿ ವಾಹಿನಿಗೆ "ಆರ್ಥಿಕ  ಪ್ರಯೋಜನ'' ನೀಡುವುದನ್ನು ಮುಂದುವರಿಸುತ್ತಾ ಹೋಗಬೇಕು ಇಲ್ಲದೇ ಹೋದಲ್ಲಿ ಅರ್ನಬ್ ಇಂತಹ  ಸುದ್ದಿಗಳನ್ನು ಪ್ರಸಾರ ಮಾಡುತ್ತಲೇ ಇರುತ್ತಾರೆ ಎಂದು ಸಂಸ್ಥೆಯ ಕೆಲ ಉದ್ಯೋಗಿಗಳು ತಮಗೆ ಬೆದರಿಕೆಯೊಡ್ಡಿದ್ದರು, ಅಷ್ಟೇ ಅಲ್ಲದೆ "ಸುಶಾಂತ್ ಅವರ ಕೊಲೆಗಾರ'' ಎಂದು ತಮ್ಮನ್ನು ಹೆಸರಿಸುವ ಬೆದರಿಕೆಯನ್ನೂ ರಿಪಬ್ಲಿಕ್ ಟಿವಿ ಉದ್ಯೋಗಿಗಳು ಒಡ್ಡಿದ್ದರು ಎಂದು ಆರೋಪಿಸಿದ್ದಾರೆ.

ರಿಪಬ್ಲಿಕ್ ಟಿವಿ ಉದ್ಯೋಗಿಗಳು ತಮ್ಮ ನಿವಾಸ ಪ್ರವೇಶಿಸಲು ಯತ್ನಿಸಿ ಭದ್ರತಾ ಸಿಬ್ಬಂದಿಗೆ ಹಾಗೂ ಮನೆಯ ಸಹಾಯಕರಿಗೆ ಆಗಸ್ಟ್ 22 ಹಾಗೂ 24ರ ನಡುವೆ ಕಿರುಕುಳ ನೀಡಿದ್ದರು ಎಂದು ಆರೊಪಿಸಲಾಗಿದೆ.

ಆರ್&ಆರ್ ಅಸೋಸಿಯೇಟ್ಸ್ ನ ವಕೀಲ ರಾಜೇಶ್ ಕುಮಾರ್ ಮೂಲಕ ಸಲ್ಲಿಸಲಾದ ಈ ನೋಟಿಸ್‍ನಲ್ಲಿ ಅರ್ನಬ್ ಅವರು 15 ದಿನಗಳೊಳಗೆ ರೂ. 200 ಕೋಟಿ ಪರಿಹಾರ ಹಾಗೂ ಬೇಷರತ್ ಕ್ಷಮೆ ಯಾಚಿಸದೇ ಇದ್ದರೆ ಕ್ರಿನಮಿಲ್ ಮತ್ತು ಸಿವಿಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News