ಉ. ಕೊರಿಯದ ಪರಮಾಣು, ಕ್ಷಿಪಣಿ ಕಾರ್ಯಕ್ರಮಗಳು ಜಾಗತಿಕ ಬೆದರಿಕೆ

Update: 2020-10-15 17:48 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಅ. 15: ಉತ್ತರ ಕೊರಿಯದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳು ಜಾಗತಿಕ ಬೆದರಿಕೆಯಾಗಿವೆ ಎಂದು ಅವೆುರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಬುಧವಾರ ಹೇಳಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ನಡೆದ ಸೇನಾ ಕವಾಯತಿನ ವೇಳೆ, ಈ ಹಿಂದೆ ಕಂಡಿರದ ಖಂಡಾಂತರ ಕ್ಷಿಪಣಿಗಳು ಪ್ರದರ್ಶನಗೊಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಕವಾಯತಿನ ವೇಳೆ ಕಂಡುಬಂದ ಹೊಸ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ)ಯೊಂದು ಹಲವು ಪಾಶ್ಚಾತ್ಯ ವಿಶ್ಲೇಷಕರ ಗಮನ ಸೆಳೆದಿದೆ.

ಆದರೆ, ದಕ್ಷಿಣ ಕೊರಿಯದ ಅಧಿಕಾರಿಗಳು, ಹೊಸ ಬಹು ಉಡಾವಣಾ ರಾಕೆಟ್ ವ್ಯವಸ್ಥೆ (ಎಮ್‌ಎಲ್‌ಆರ್‌ಎಸ್)ಗಳು ಹಾಗೂ ವೇಗವಾಗಿ ಸಾಗುವ ಮತ್ತು ಬೇಕಾದ ದಿಕ್ಕಿಗೆ ತಿರುಗಿಸಬಲ್ಲ ಕಿರು ವ್ಯಾಪ್ತಿಯ ಕ್ಷಿಪಣಿಗಳ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಇವುಗಳನ್ನು ದಕ್ಷಿಣ ಕೊರಿಯದ ನೆಲೆಗಳ ಮೇಲೆ ಬಳಸುವುದು ಸುಲಭವಾಗಿದೆ.

‘‘ಉತ್ತರ ಕೊರಿಯದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳು ವಲಯದ ಹಾಗೂ ಜಗತ್ತಿನ ಭದ್ರತೆ ಮತ್ತು ಸ್ಥಿರತೆಗೆ ಗಂಭೀರ ಅಪಾಯವಾಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ’’ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಪೆಂಟಗನ್‌ನಲ್ಲಿ ದಕ್ಷಿಣ ಕೊರಿಯದ ರಕ್ಷಣಾ ಸಚಿವ ಸೂಹ್ ವೂಕ್ ಜೊತೆಗಿನ ಮಾತುಕತೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News