ಹಾಥರಸ್ ಪ್ರಕರಣ: ಪೊಲೀಸರಿಗೆ ಮೊಟಕಿದ ನ್ಯಾಯಾಲಯ!

Update: 2020-10-16 05:19 GMT

ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಸರಕಾರ ಬೆತ್ತಲೆಯಾಗುತ್ತಿದೆ. ಸಂತ್ರಸ್ತ ಕುಟುಂಬದ ಜೊತೆಗೆ ಸ್ಥಳೀಯ ವ್ಯವಸ್ಥೆ ಎಸಗಿದ ದ್ರೋಹಗಳನ್ನು ಅಲಹಾಬಾದ್ ಕೋರ್ಟ್ ಬೆರಳು ಮಾಡಿ ತೋರಿಸಿದೆಯಾದರೂ, ಯಾವ ಲಜ್ಜೆಯೂ ಇಲ್ಲದೆ ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ. ಮುಖ್ಯವಾಗಿ ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ದಾರಿಯನ್ನೇ ತಿರುಚಲು ಅಲ್ಲಿನ ಪೊಲೀಸರು ಯತ್ನಿಸಿದರು. ಹಾಥರಸ್‌ನ ಸಂತ್ರಸ್ತೆಗೆ ನ್ಯಾಯ ನೀಡಲು ಶ್ರಮಿಸಬೇಕಾದ ತನಿಖೆ, ಇಡೀ ಪ್ರಕರಣ ನಡೆದಿರುವುದೇ ಸರಕಾರವನ್ನು ಉರುಳಿಸುವುದಕ್ಕೆ ಎನ್ನುವುದನ್ನು ಸಾಬೀತು ಮಾಡಲು ಪೊಲೀಸರು ಹೊರಟರು. ಸಂತ್ರಸ್ತೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ, ಆಕೆಯ ವಿರುದ್ಧ ಅನೈತಿಕ ಆರೋಪಗಳನ್ನು ಹೊರಿಸುವ ಪ್ರಯತ್ನವೂ ಜೊತೆ ಜೊತೆಗೇ ನಡೆಯಿತು. ಸಂತ್ರಸ್ತೆಯ ಪರವಾಗಿ ಹೋರಾಟಗಾರರು ಬೀದಿಗಿಳಿದು ನಡೆಸಿದ ಪ್ರತಿಭಟನೆಗಳೆಲ್ಲವನ್ನೂ ‘ಸರಕಾರವನ್ನು ಉರುಳಿಸಲು ನಡೆಸಿದ ಸಂಚು’ ಎಂದೂ ಬಿಂಬಿಸಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಮುಸ್ಲಿಮ್ ಉಗ್ರರೂ ಇದರ ಹಿಂದಿದ್ದಾರೆ ಎನ್ನುವ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಯಿತು. ವಶಕ್ಕೆ ತೆಗೆದುಕೊಂಡ ಆರೋಪಿಗಳನ್ನು ಬಿಡುಗಡೆ ಮಾಡಿಸಲು ಒತ್ತಾಯಿಸಿ ಬೆದರಿಕೆ ಒಡ್ಡುತ್ತಿದ್ದ ಠಾಕೂರ್ ಸಮುದಾಯಕ್ಕೆ ನೇರ ಬೆಂಬಲವನ್ನು ನೀಡಿದ ಪೊಲೀಸರು, ಮಗದೊಂದೆಡೆ ಸಂತ್ರಸ್ತರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ ದಲಿತ ನಾಯಕರ ವಿರುದ್ಧ ಸಾಲು ಸಾಲಾಗಿ ಕೇಸು ದಾಖಲಿಸಿದರು. ವರದಿ ಮಾಡಲು ಹೊರಟ ಪತ್ರಕರ್ತರನ್ನೂ ಬಂಧಿಸಲಾಯಿತು.

ಸುಮಾರು ಒಂದು ತಿಂಗಳಿನಿಂದ ಸಂತ್ರಸ್ತರ ಕುಟುಂಬವನ್ನು ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದರು. ಅವರನ್ನು ಭೇಟಿಯಾಗುವುದಕ್ಕಾಗಲಿ ಅಥವಾ ಅವರು ಇತರರನ್ನು ಭೇಟಿಯಾಗುವುದಕ್ಕಾಗಲಿ ಪೊಲೀಸರು ಅವಕಾಶ ನೀಡಿರಲಿಲ್ಲ. ಇಷ್ಟಾದರೂ ‘ತಾವು ಸಂತ್ರಸ್ತರಿಗೆ ಗೃಹ ಬಂಧನ ವಿಧಿಸಿಲ್ಲ’ ಎಂಬ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಿದರು. ಆದರೆ ಅದೇ ಸಂದರ್ಭದಲ್ಲಿ, 50ಕ್ಕೂ ಅಧಿಕ ಪೊಲೀಸರು ಮತ್ತು 20ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಸಂತ್ರಸ್ತರ ಪರಿಸರದಲ್ಲಿ ನೇಮಕ ಮಾಡಿರುವುದನ್ನು ಸ್ಥಳೀಯ ಪೊಲೀಸರೇ ಒಪ್ಪಿಕೊಂಡಿದ್ದಾರೆ. ಬಹುಶಃ ಇದನ್ನು ‘ಸಂತ್ರಸ್ತರಿಗೆ ನೀಡಿರುವ ಭದ್ರತೆ’ ಎಂದು ಸರಕಾರ ಸಮರ್ಥಿಸಿಕೊಳ್ಳಬಹುದು. ನ್ಯಾಯಾಲಯದಲ್ಲೂ ಈ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದು ‘ಮೂರು ಸ್ತರಗಳ ಭದ್ರತೆಯನ್ನು ಸಂತ್ರಸ್ತರ ಕುಟುಂಬಕ್ಕೆ ನೀಡಿದ್ದೇವೆ’ ಎಂದು ಸರಕಾರ ಹೇಳಿದೆ. ಆದರೆ ಈ ಭದ್ರತೆ ಸಂತ್ರಸ್ತರ ರಕ್ಷಣೆಗಿಂತ, ಆರೋಪಿಗಳ ರಕ್ಷಣೆಗಾಗಿ ನೀಡಲಾಗಿದೆ ಎಂದು ಮಾಧ್ಯಮಗಳು ಆರೋಪಿಸುತ್ತಿವೆ. ಭದ್ರತೆ ನೀಡುವ ಹೆಸರಿನಲ್ಲಿ ಸಂತ್ರಸ್ತೆಯನ್ನು ಯಾರೂ ಭೇಟಿ ಮಾಡದಂತೆ ತಡೆಯುವುದೇ ಸರಕಾರದ ಉದ್ದೇಶವಾಗಿದೆ.

ಇವೆಲ್ಲದರ ನಡುವೆಯೂ ಪೊಲೀಸರು ಎಲ್ಲೆಲ್ಲಿ ಎಡವಿದ್ದಾರೆ ಎನ್ನುವುದನ್ನು ಎತ್ತಿ ತೋರಿಸುವ ಮೂಲಕ ನ್ಯಾಯಾಲಯ ಪೊಲೀಸರ ತಲೆಗೆ ಮೊಟಕಿದೆ. ಮುಖ್ಯವಾಗಿ ಸಂತ್ರಸ್ತೆಯ ಮೃತದೇಹವನ್ನು ಧಾರ್ಮಿಕ ವಿಧಿವಿಧಾನಗಳಿಲ್ಲದೆ ಪೊಲೀಸರು ಹೇಗೆ ಸುಟ್ಟು ಹಾಕಿದರು ಎಂಬ ಪ್ರಶ್ನೆಯನ್ನು ನ್ಯಾಯಾಲಯ ಕೇಳಿದೆ. ‘ಇದು ಮಾನವ ಹಕ್ಕು ಉಲ್ಲಂಘನೆ’ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಒಂದೆಡೆ ಸರಕಾರ ‘ಹಾಥರಸ್ ಪ್ರಕರಣ ಸರಕಾರವನ್ನು ಉರುಳಿಸುವುದಕ್ಕೆ ನಡೆಸಿರುವ ಸಂಚು’ ಎಂದು ಹೇಳುತ್ತದೆ. ಹಾಗಾದರೆ, ಮೃತದೇಹವನ್ನು ಮನೆಯವರ ಒಪ್ಪಿಗೆಯಿಲ್ಲದೆ ರಾತ್ರೋ ರಾತ್ರಿ ಸುಟ್ಟು ಹಾಕುವ ಮೂಲಕ ಪೊಲೀಸರು ಕೂಡ ಆ ಸಂಚಿನಲ್ಲಿ ಪಾಲುದಾರರಾಗಿದ್ದರೇ? ಪೊಲೀಸರನ್ನು ಬಳಸಿಕೊಂಡು ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಸಂಚು ನಡೆಸುವ ಸಾಮರ್ಥ್ಯ ಈ ಪೊಲೀಸ್ ಸಿಬ್ಬಂದಿಗಿದೆಯೇ? ಸಂತ್ರಸ್ತೆಯ ಮೃತದೇಹವನ್ನು ಪೊಲೀಸರು ಸುಟ್ಟಿದ್ದು ಒಂದೆಡೆ ಮಾನವ ಹಕ್ಕಿನ ಉಲ್ಲಂಘನೆಯಾಗಿದ್ದರೆ, ತನಿಖೆಯಲ್ಲಿ ಪ್ರಧಾನ ಪಾತ್ರವಹಿಸುವ ಸಾಕ್ಷವೊಂದರ ನಾಶವೂ ಆ ಮೂಲಕ ನಡೆದಿದೆ. ಪೊಲೀಸರ ಈ ಕ್ರಮವೇ ಹಾಥರಸ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದನ್ನು ಹೇಳುತ್ತದೆ. ಒಂದು ವೇಳೆ ಅತ್ಯಾಚಾರ ನಡೆಯದೇ ಇದ್ದರೆ, ಸಾಕ್ಷವನ್ನು ನಾಶ ಮಾಡುವ ಅಗತ್ಯವೇ ಇರುತ್ತಿರಲಿಲ್ಲ.

ಇದೇ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಬಾಲಪಾಠಗಳನ್ನು ಬೋಧಿಸಿದೆ. ‘ಅತ್ಯಾಚಾರದ ವ್ಯಾಖ್ಯಾನ ಕುರಿತಂತೆ 2013ರಿಂದ ಅನ್ವಯವಾಗುವಂತೆ ಕಾನೂನಿನಲ್ಲಿ ಮಾಡಲಾದ ತಿದ್ದುಪಡಿಗಳ ಕುರಿತು ನಿಮಗೆ ಅರಿವಿದೆಯೇ?’ ಎಂದು ಪ್ರಶ್ನಿಸಿದೆ. ಮುಖ್ಯವಾಗಿ, ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರ ನಡೆದೇ ಇಲ್ಲ ಎಂದು ಪೊಲೀಸರು ತೀರ್ಮಾನಕ್ಕೆ ಬರುವಂತೆ ಇಲ್ಲ. ಫೊರೆನ್ಸಿಕ್ ತನಿಖೆ ವೇಳೆ ವೀರ್ಯ ಪತ್ತೆಯಾಗಿಲ್ಲ ಎಂಬುದು ಪರಿಗಣಿಸಬೇಕಾದ ಅಂಶವಾದರೂ, ಬೇರೆ ಸಾಕ್ಷಗಳಿದ್ದರೆ, ‘ಅತ್ಯಾಚಾರ ನಡೆದಿಲ್ಲ’ ಎಂಬ ನಿರ್ಧಾರಕ್ಕೆ ಬರಲು ಪೊಲೀಸರಿಗೆ ಅವಕಾಶವಿಲ್ಲ. ಇದನ್ನು ಮುಂದಿಟ್ಟುಕೊಂಡು ನ್ಯಾಯಾಲಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಆತುರಾತುರವಾಗಿ ಮಹಿಳೆಯ ಮೃತದೇಹವನ್ನು ಸುಟ್ಟು ಹಾಕಿರುವುದಕ್ಕೆ ಸಂಬಂಧಿಸಿ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಬೇಕು ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿದೆ. ತನಿಖೆಯನ್ನು ದಾರಿತಪ್ಪಿಸುವಲ್ಲಿ ಪೊಲೀಸರ ಕೊಡುಗೆ ಇನ್ನಷ್ಟಿವೆ. ತನಿಖೆಗೆ ಸಂಬಂಧಿಸಿ ಸಿಬಿಐ ಬುಧವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ, ಅಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಅಳಿಸಲಾಗಿರುವುದು ಬೆಳಕಿಗೆ ಬಂತು. ಈ ಬಗ್ಗೆಯೂ ಪೊಲೀಸರು ಬೇಜವಾಬ್ದಾರಿ ಉತ್ತರಗಳನ್ನು ನೀಡಿದ್ದಾರೆ. ‘ಅತ್ಯಾಚಾರಕ್ಕೂ ಆಸ್ಪತ್ರೆಗೂ ಯಾವ ಸಂಬಂಧವೂ ಇಲ್ಲದೇ ಇರುವುದರಿಂದ, ದೃಶ್ಯಾವಳಿಗಳನ್ನು ಉಳಿಸಿಕೊಳ್ಳಲು ಸೂಚನೆ ನೀಡಿಲ್ಲ’ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಸಂತ್ರಸ್ತೆಯ ಅಂತಿಮ ಕ್ಷಣಗಳಿಗೆ ಸಿಸಿ ಟಿವಿ ಸಾಕ್ಷಿಯಾಗಿತ್ತು. ಅದನ್ನು ಉಳಿಸಿಕೊಂಡಿಲ್ಲ ಎನ್ನುವುದಕ್ಕಿಂತ, ಪೊಲೀಸರ ಪ್ರಭಾವದಿಂದಲೇ ಅದನ್ನು ಅಳಿಸಿ ಹಾಕಲಾಗಿದೆ ಎನ್ನುವುದು ಹೆಚ್ಚು ಸರಿ. ಇದೀಗ ತನಿಖೆಯನ್ನು ಸಿಬಿಐ ಮುಂದುವರಿಸುತ್ತಿದೆಯಾದರೂ, ತನಿಖೆಗೆ ಬೇಕಾದ ಬಹುಮುಖ್ಯ ಸಾಕ್ಷಗಳನ್ನು ಪೊಲೀಸರೇ ನಾಶ ಮಾಡಿರುವಾಗ, ಸಿಬಿಐ ಸಂತ್ರಸ್ತೆಗೆ ನ್ಯಾಯ ನೀಡುವಲ್ಲಿ ಯಶಸ್ವಿಯಾಗುವುದು ಅನುಮಾನ.

ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುತ್ತದೆಯೋ ಇಲ್ಲವೋ, ಆದರೆ ನಿಜವಾದ ಆರೋಪಿಗಳು ನ್ಯಾಯದ ಕುಣಿಕೆಯಿಂದ ಪಾರಾಗುವುದರಲ್ಲಿ ಪಾತ್ರವಹಿಸಿದ ಪೊಲೀಸರಿಗೆ ಮಾತ್ರ ಶಿಕ್ಷೆಯಾಗಲೇಬೇಕಾಗಿದೆ. ಸಂತ್ರಸ್ತೆಯ ಮೇಲೆ ನಡೆದ ಅತ್ಯಾಚಾರದಲ್ಲಿ ಜಿಲ್ಲಾಡಳಿತವು ಪರೋಕ್ಷವಾಗಿ ಭಾಗವಹಿಸಿದೆಯೆಂದು ಭಾವಿಸಿ ಅವರೆಲ್ಲರನ್ನೂ ಸಿಬಿಐ ವಶಕ್ಕೆ ತೆಗೆದುಕೊಳ್ಳಬೇಕು. ಪೊಲೀಸರ ಮೇಲೆ ಒತ್ತಡ ಹಾಕಿದ ರಾಜಕಾರಣಿಗಳನ್ನೂ ಗುರುತಿಸಿ ಅವರನ್ನೂ ಆರೋಪಿಗಳಾಗಿ ಸೇರಿಸಬೇಕು. ಆದರೆ, ಒಂದು ಸರಕಾರವೇ ಅನ್ಯಾಯದ ವಿರುದ್ಧ ಟೊಂಕ ಕಟ್ಟಿ ನಿಂತಿರುವಾಗ, ಸರಕಾರಕ್ಕೆ ತಗ್ಗಿ ಬಗ್ಗಿ ನಡೆಯುತ್ತಾ ತನಿಖೆ ನಡೆಸಬೇಕಾದ ಅನಿವಾರ್ಯತೆಯುಳ್ಳ ಸಿಬಿಐ, ತನ್ನ ಗುರಿ ತಲುಪುವುದು ಹೇಗೆ ಸಾಧ್ಯ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News