​ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಕೊಲೆ; ಅತ್ಯಾಚಾರ ಶಂಕೆ

Update: 2020-10-16 04:09 GMT

ಲಕ್ನೋ : ಬಾರಬಂಕಿ ಸಮೀಪದ ಗ್ರಾಮವೊಂದರಲ್ಲಿ ಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಹದಿಹರೆಯದ ದಲಿತ ಯುವತಿಯ ಮೃತದೇಹ ಪತ್ತೆಯಾಗಿದೆ. ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿರಬೇಕು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.

ಸತ್ರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬದವರು ಆಪಾದಿಸಿದ್ದಾರೆ.

"ಭತ್ತ ಕಟಾವು ಮಾಡಲು ಗದ್ದೆಗೆ ಹೋಗಿದ್ದ  ಯುವತಿ ನಾಪತ್ತೆಯಾಗಿದ್ದಳು. ಯುವತಿಯನ್ನು ಹುಡುಕುತ್ತಾ ಕುಟುಂಬದವರು ಹೋದಾಗ, ಬುಧವಾರ ರಾತ್ರಿ ಗದ್ದೆಯಲ್ಲಿ ಮೃತದೇಹ ಪತ್ತೆಯಾಯಿತು ಎಂದು ಬಾರಾಬಂಕಿ ಎಸ್ಪಿ ಆರ್‌ಎಸ್ ಗೌತಮ್ ಹೇಳಿದ್ದಾರೆ.

ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಆಕೆಯ ಬಟ್ಟೆಗಳು ಹರಿದಿದ್ದು, ಇದು ಕೊಲೆ ಪ್ರಕರಣ ದಂತೆ ಕಂಡುಬರುತ್ತಿದೆ ಎಂದು ವಿವರಿಸಿದ್ದಾರೆ. ಯುವತಿಯ ದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಗೆ ಮುನ್ನ ಅತ್ಯಾಚಾರ ನಡೆದಿರಬೇಕು ಎಂದು ಮೃತ ಯುವತಿಯ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿಯನ್ನು ಆಡಳಿತಯಂತ್ರ ಬಹಿರಂಗಪಡಿಸಿಲ್ಲ ಹಾಗೂ ಲೈಂಗಿಕ ದೌರ್ಜನ್ಯ ನಡೆದ ಸಾಧ್ಯತೆಗಳ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಅಭಿಪ್ರಾಯ ಕೇಳಲಾಗಿದೆ.

ಏತನ್ಮಧ್ಯೆ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ ಎಂದು ಬಾರಾಬಂಕಿ ಸದರ್ ಠಾಣೆಯ ವೃತ್ತನಿರೀಕ್ಷಕ ರಾವ್ ಸೂರತ್ ಸೋನ್‌ಕರ್ ಹೇಳಿದ್ದಾರೆ.

ಈಗಾಗಲೇ ಭಾರತೀಯ ದಂಡಸಂಹಿತೆ ಸೆಕ್ಷನ್ 302ರ ಅನ್ವಯ ಕೊಲೆ ಪ್ರಕರಣವನ್ನು ಪತ್ತೆಯಾಗದ ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News