ಭಾರತ ರತ್ನ : ಅಂದು ಕಾಂಗ್ರೆಸ್ ನ ಜಾತ್ಯತೀತ ಬ್ರಾಹ್ಮಣರು, ಇಂದು ಬಿಜೆಪಿಯ ಹಿಂದುತ್ವ ಬ್ರಾಹ್ಮಣರ ಪಾರಮ್ಯ

Update: 2020-10-16 05:41 GMT

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನವನ್ನು ಮಾಜಿ ಪ್ರಧಾನಿ ದಿ.ಪಿ.ವಿ.ನರಸಿಂಹರಾವ್ ಮತ್ತು ಖ್ಯಾತ ಸಂಗೀತಗಾರ-ಗಾಯಕ ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನೀಡುವಂತೆ ಆಗ್ರಹಗಳು ಕೇಳಿ ಬರತೊಡಗಿವೆ. ಪ್ರಶಸ್ತಿಗೆ ಯಾರು ಅರ್ಹರು ಎನ್ನುವುದು ಚರ್ಚೆಯ ವಿಷಯವಾಗಿದ್ದರೂ, ನರಸಿಂಹರಾವ್ ಮತ್ತು ಬಾಲಸುಬ್ರಹ್ಮಣ್ಯಂ ಅವರ ಪರವಾಗಿ ವಕಾಲತ್ ವಹಿಸುವ ಸಂಗತಿಯೊಂದಿದೆ. ಅದು ಜಾತಿ, ಇಬ್ಬರೂ ಬ್ರಾಹ್ಮಣರು.

ಭಾರತರತ್ನ ಪ್ರಶಸ್ತಿಯನ್ನು ಈವರೆಗೆ 46 ಭಾರತೀಯರು ಮತ್ತು ಇಬ್ಬರು ವಿದೇಶೀಯರಿಗೆ (ಖಾನ್ ಅಬ್ದುಲ್ ಗಫ್ಫಾರ್ ಖಾನ್ ಮತ್ತು ನೆಲ್ಸನ್ ಮಂಡೇಲಾ) ನೀಡಲಾಗಿದೆ. ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತವನ್ನು ಒಂದು ಉತ್ಪಾದನಾ ದೇಶವನ್ನಾಗಿಸಲು ಬೆವರು ಹರಿಸಿರುವ ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿಯ ಒಬ್ಬರೂ ಈವರೆಗೆ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿಲ್ಲ.

ಈ ಹಿಂದೆ ತೆಲುಗು ದೇಶಂ ಪಕ್ಷವು ತನ್ನ ಸ್ಥಾಪಕ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರಿಗೆ ಭಾರತರತ್ನ ದೊರೆಯಬೇಕೆಂದು ಒತ್ತಡ ಹೇರಲು ಪ್ರಯತ್ನಿಸಿತ್ತು. ಆದರೆ ಕಮ್ಮ ಸಮುದಾಯದ ನಾಯಕ ಎನ್‌ಟಿಆರ್‌ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ತನ್ನ ಸಮಕಾಲೀನರಿಗೆ ಸಿಕ್ಕಂತಹ ಪ್ರಚಾರ ದೊರೆಯಲಿಲ್ಲವಾದ್ದರಿಂದ ಟಿಡಿಪಿಯ ಬೇಡಿಕೆಗೆ ಯಾವುದೇ ಬೆಂಬಲ ಸಿಕ್ಕಿರಲಿಲ್ಲ.

ಜಾತಿ, ಉಪೇಕ್ಷೆ

ಈವರೆಗೆ ಭಾರತರತ್ನ ಗೌರವಕ್ಕೆ ಪಾತ್ರರಾದವರಲ್ಲಿ 29 ಬ್ರಾಹ್ಮಣರು, ಐವರು ಮುಸ್ಲಿಮರು, ನಾಲ್ವರು ಕಾಯಸ್ಥರು, ಮೂವರು ಶೂದ್ರರು ಹಾಗೂ ದಲಿತ, ಬನಿಯಾ, ಖತ್ರಿ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ತಲಾ ಓರ್ವರು ಸೇರಿದ್ದಾರೆ. ಕೊನೆಯ ಬಾರಿಗೆ ಪ್ರಶಸ್ತಿಗೆ ಪಾತ್ರರಾದ ದಿ.ಭೂಪೇನ್ ಹಝಾರಿಕಾ ಅವರ ಜಾತಿ ಯಾವುದು ಎನ್ನುವುದನ್ನು ಯಾವುದೇ ಮೂಲದಿಂದಲೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ನಾಲ್ವರು ಭಾರತರತ್ನ ಪುರಸ್ಕೃತ ಮಹಿಳೆಯರಲ್ಲಿ ಮೂವರು ಬ್ರಾಹ್ಮಣರಾಗಿದ್ದರೆ, ಓರ್ವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಭಾರತದ ಜನಸಂಖ್ಯೆಯ ಕೇವಲ ಶೇ.4ರಷ್ಟಿರುವ ಬ್ರಾಹ್ಮಣರು ಇರದಿದ್ದರೆ ಬಹುಶಃ ದೇಶದಲ್ಲಿ ಭಾರತರತ್ನ ಪ್ರಶಸ್ತಿಯನ್ನು ಪ್ರದಾನಿಸಲು ಅರ್ಹರಾದ ಸಾಕಷ್ಟು ಜನರು ದೊರೆಯುತ್ತಿರಲಿಲ್ಲವೇನೋ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ !

ಭಾರತದ ಮಣ್ಣಿನಿಂದ ರತ್ನಗಳನ್ನು ಆಯ್ಕೆ ಮಾಡಲು ನಿಷ್ಪಕ್ಷ, ಪ್ರಾಮಾಣಿಕ ಮತ್ತು ಜಾತಿ ಮುಕ್ತ ಪದ್ಧತಿಯನ್ನು ಭಾರತ ಸರಕಾರವು ಅನುಸರಿಸುತ್ತಿದೆ ಎನ್ನುವುದನ್ನು ಪ್ರಶಸ್ತಿ ಪುರಸ್ಕೃತರ ಪಟ್ಟಿಯು ನಮಗೆ ಸೂಚಿಸುತ್ತಿದೆಯೇ ? ದೇಶದ ಮಣ್ಣು ಮುಖ್ಯವಾಗಿ ಶೂದ್ರರು, ದಲಿತರು ಮತ್ತು ಆದಿವಾಸಿಗಳನ್ನು ಒಳಗೊಂಡಿದೆ. ಭಾರತದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚಿನವರು ಶೂದ್ರರಾಗಿದ್ದರೂ ಪ್ರಶಸ್ತಿಯ 66 ವರ್ಷಗಳ ಇತಿಹಾಸದಲ್ಲಿ ಕೇವಲ ಮೂವರು ಮಾತ್ರ ಭಾರತರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ಶೇ.18ರಷ್ಟಿರುವ ದಲಿತ ಸಮುದಾಯದಲ್ಲಿ ಒಬ್ಬರು ಮಾತ್ರ, ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಪ್ರಶಸ್ತಿ ಲಭಿಸಿದೆ. ಶೇ.7ರಷ್ಟಿರುವ ಆದಿವಾಸಿ ಸಮುದಾಯದಲ್ಲಿ ಯಾರಿಗೂ ಭಾರತರತ್ನ ಎಂದೆನಿಸಿಕೊಳ್ಳಲು ಸಾಧ್ಯವಾಗಿಲ್ಲ.

1991ರಲ್ಲಷ್ಟೇ ವಲ್ಲಭಭಾಯಿ ಪಟೇಲ್ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ಭಾರತರತ್ನ ಎಂದು ಗುರುತಿಸಲಾಗಿತ್ತು. ಪಟೇಲ್‌ಗಿಂತ ಮೊದಲು ಕೇವಲ ಇಬ್ಬರು ಶೂದ್ರರು....ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಕೆ.ಕಾಮರಾಜ ಮತ್ತು ಎಂ.ಜಿ. ರಾಮಚಂದ್ರನ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು.

ರಾಜಕೀಯ ಆಯ್ಕೆಗಳು

1954ರಿಂದ ಭಾರತರತ್ನ ಪ್ರಶಸ್ತಿಯನ್ನು ಪ್ರದಾನಿಸಲು ಆರಂಭಿಸಲಾಗಿತ್ತು. ಆ ವರ್ಷ ಸಿ.ರಾಜಗೋಪಾಲಾಚಾರಿ, ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಿ.ವಿ.ರಾಮನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆಗಿನ್ನೂ 60ರ ಹರೆಯದಲ್ಲಿದ್ದ ಈ ಮೂವರು ತುಲನಾತ್ಮಕವಾಗಿ ಸಣ್ಣ ಪ್ರಾಯದವರೇ ಆಗಿದ್ದರು ಮತ್ತು ತಮಿಳುನಾಡಿಗೆ ಸೇರಿದವರಾಗಿದ್ದರು.

ದೇಶಾದ್ಯಂತದಿಂದ ಭಾರತರತ್ನವನ್ನು ಆಯ್ಕೆ ಮಾಡಲು ಅಥವಾ ಗುರುತಿಸಲು ಕೇಂದ್ರ ಸರಕಾರವು ಎಂದೂ ಯಾವುದೇ ನೀತಿಗಳನ್ನು ರೂಪಿಸಿರಲಿಲ್ಲ. ಕೆಲವರಿಗೆ ಅವರು ಆಯ್ಕೆಯ ಮೇಲೆ ಪ್ರಭಾವ ಬೀರುವ ಹುದ್ದೆಯಲ್ಲಿದ್ದಾಗ ಭಾರತರತ್ನವನ್ನು ನೀಡಲಾಗಿತ್ತು. ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ಪ್ರಧಾನಿಗಳಾಗಿದ್ದಾಗಲೇ ಈ ಗೌರವಕ್ಕೆ ಪಾತ್ರರಾಗಿದ್ದರು. ಕೆಲವರಿಗೆ ಅವರು ನಿಧನರಾದ ಎಷ್ಟೋ ಸಮಯದ ಬಳಿಕ ಭಾರತರತ್ನ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ ( ಅಂಬೇಡ್ಕರ್‌ಗೆ 1990ರಲ್ಲಿ ಮತ್ತು ಪಟೇಲ್‌ಗೆ 1991ರಲ್ಲಿ).

ನಾಡಾರ್ ಸಮುದಾಯಕ್ಕೆ ಸೇರಿದ ಹೆಚ್ಚು ವಿದ್ಯೆ ಇಲ್ಲದಿದ್ದ ಕೆ.ಕಾಮರಾಜ, ಭೌತ ವಿಜ್ಞಾನಿ ಸಿ.ವಿ.ರಾಮನ್, ವಿದೇಶಿ ವಿವಿಯಿಂದ ಪಿಎಚ್‌ಡಿ ಪಡೆದಿರುವ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಮತ್ತು ಅನಿವಾಸಿ ಭಾರತೀಯರು; ಹೀಗೆ ಭಾರತರತ್ನ ಪಟ್ಟಿಯನ್ನು ಅವಲೋಕಿಸಿದರೆ ದಿಲ್ಲಿಯ ಅಧಿಕಾರ ಗದ್ದುಗೆಯು ತನಗೆ ಬೇಕಾದವರನ್ನು ಆಯ್ಕೆ ಮಾಡುವ ಪದ್ಧತಿಯನ್ನು ಹೊಂದಿರುವಂತೆ ಕಂಡು ಬರುತ್ತದೆ. ಇಲ್ಲಿ ಸಾಹಿತ್ಯ ಪ್ರತಿಭೆಗಳು ಮುಖ್ಯವಲ್ಲ, ಹಲವಾರು ಭಾರತರತ್ನ ಪುರಸ್ಕೃತರು ತಮ್ಮ ಜೀವಮಾನದಲ್ಲಿ ಏನನ್ನೂ ಬರೆದಿಲ್ಲ. ಭಾರತರತ್ನಕ್ಕೆ ಆಯ್ಕೆ ದಿಲ್ಲಿಯಲ್ಲಿರುವ ಅಧಿಕಾರವನ್ನು ಅವಲಂಬಿಸಿರುತ್ತದೆಯೇ ಹೊರತು ರಾಜ್ಯಗಳ ಅಧಿಕಾರವನ್ನಲ್ಲ. ವ್ಯಕ್ತಿಯೋರ್ವರು 34 ವರ್ಷಗಳ ಸುದೀರ್ಘ ಕಾಲ ರಾಜ್ಯ ಮುಖ್ಯಮಂತ್ರಿಯಾಗಿದ್ದರೂ (ಜ್ಯೋತಿ ಬಸು) ಅವರು ಭಾರತರತ್ನ ಪ್ರಶಸ್ತಿಗೆ ಅರ್ಹರಲ್ಲ ! ಹೀಗಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಯಾರಾದರೂ ಹೇಗೆ ಅರ್ಹರಾಗುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಆಳುತ್ತಿರುವವರು ಯಾರೇ ಆಗಿರಲಿ,ಯಾವಾಗಲೂ ವ್ಯಕ್ತಿಯ ಜಾತಿಯ ಮತ್ತು ಆಯ್ಕೆಯಿಂದ ಸರಕಾರಕ್ಕೆ ಆಗಬಹುದಾದ ರಾಜಕೀಯ ಲಾಭಗಳ ಆಧಾರದಲ್ಲಿ ಆಡಳಿತಾರೂಢ ಪಕ್ಷವು ಭಾರತರತ್ನ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಪಟೇಲ್ ಅವರು ತನ್ನ ನಿಧನದ 41 ವರ್ಷಗಳ ಬಳಿಕ ಭಾರತರತ್ನಕ್ಕೆ ಅರ್ಹರೆಂದು ಗುರುತಿಸಲ್ಪಟ್ಟಿದ್ದರೆ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ತನ್ನ ನಿಧನದ 34 ವರ್ಷಗಳ ಬಳಿಕ ಈ ಪ್ರಶಸ್ತಿಗೆ ಅರ್ಹರಾಗಿದ್ದರು,ಅದೂ 1990ರಲ್ಲಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿದ್ದ ವಿ.ಪಿ.ಸಿಂಗ್ ಸರಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ. ಚೌಧರಿ ಚರಣ್ ಸಿಂಗ್ ಅವರು ಅಗ್ರ ರೈತನಾಯಕ ಮತ್ತು ಮಾಜಿ ಪ್ರಧಾನಿಯಾಗಿದ್ದರೂ ಭಾರತರತ್ನ ಅವರಿಗೆಂದೂ ಒಲಿಯಲಿಲ್ಲ.

ಅಂದ ಹಾಗೆ ಅಂಬೇಡ್ಕರ್ ಮತ್ತು ವರ್ಣಭೇದದ ವಿರುದ್ಧ ಮತ್ತು ದಕ್ಷಿಣ ಆಫ್ರಿಕಾದ ಕರಿಯರ ವಿಮೋಚನೆಗಾಗಿ ಹೋರಾಡಿದ್ದ ಜಾಗತಿಕ ವರ್ಚಸ್ಸಿನ ನಾಯಕ ಮಂಡೇಲಾ ಅವರಿಗೆ ವಿ.ಪಿ.ಸಿಂಗ್ ಸರಕಾರವೇ ಭಾರತರತ್ನವನ್ನು ಪ್ರದಾನಿಸಿತ್ತು. ಆದರೆ ಸ್ವತಃ ವಿ.ಪಿ.ಸಿಂಗ್ ಅವರಿಗೆ ಬಹುಶಃ ಮಂಡಲ್ ಪರ ಸರಕಾರವೊಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವವರೆಗೆ ಭಾರತರತ್ನ ಪ್ರಶಸ್ತಿ ದೊರೆಯುವ ಸಾಧ್ಯತೆಗಳಿಲ್ಲ, ಸದ್ಯೋ ಭವಿಷ್ಯದಲ್ಲಂತೂ ಅದು ಘಟಿಸುವಂತೆ ಕಂಡುಬರುತ್ತಿಲ್ಲ.

Similar News