ಬ್ರಿಟನ್‌ನಲ್ಲಿ ಬಿಳಿಯರಿಗಿಂತ ಭಾರತೀಯ ಮೂಲದವರು ಕೋವಿಡ್‌ಗೆ ಬಲಿಯಾಗುವ ಅಪಾಯ ಅಧಿಕ

Update: 2020-10-17 18:12 GMT

ಲಂಡನ್,ಅ.17: ಇಂಗ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಜನಾಂಗೀಯ ಸಮುದಾಯಗಳು ಕೋವಿಡ್-19 ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆಯು ಆ ದೇಶದಲ್ಲಿ ವಾಸಿಸುವ ಬಿಳಿ ಜನಾಂಗೀಯ ಪುರುಷರು ಹಾಗೂ ಮಹಿಳೆಯರಿಗಿಂತ 50-70 ಶೇಕಡ ಅಧಿಕವೆಂದು ಲಂಡನ್‌ನಲ್ಲಿ ಶುಕ್ರವಾರ ಬಿಡುಗಡೆಯಾದ ಅಂಕಿಅಂಶ ವಿಶ್ಲೇಷಣಾ ವರದಿಯೊಂದು ತಿಳಿಸಿದೆ.

ಕೊರೋನ ವೈರಸ್ ಸೋಂಕಿನ ಪರಿಣಾಮ ಬೀರುವಿಕೆಯಲ್ಲಿ ಜನಾಂಗೀಯವಾಗಿ ವಿಭಿನ್ನತೆಯಿರುವುದಾಗಿ ಬ್ರಿಟನ್‌ನ ರಾಷ್ಟ್ರೀಯ ಅಂಕಿಅಂಶ ಕಾರ್ಯಾಲಯ (ಓಎನ್‌ಎಸ್) ವರದಿ ಈ ಹಿಂದೆ ಹೇಳಿತ್ತು. ಈ ಅಂಕಿಅಂಶಗಳನ್ನು ಈಗ ಕಾರ್ಯಾಲಯವು ತಾಜಾಗೊಳಿಸಿದೆ. ಕೋವಿಡ್ ಸೋಂಕಿನ ಹರಡುವಿಯ ಜೊತೆಗೆ ವ್ಯಕ್ತಿಯ ಮೊದಲಿನ ಆರೋಗ್ಯ ಪರಿಸ್ಥಿತಿಗಳಿಗಿಂತ ಹೆಚ್ಚಾಗಿ ಜೀವನದ ಗುಣಮಟ್ಟ ಹಾಗೂ ಉದ್ಯೋಗದ ಸ್ವರೂಪವು ಹೆಚ್ಚು ನಂಟು ಹೊಂದಿದೆಯೆಂದು ಅದು ಹೇಳಿದೆ.

2020ರ ಜುಲೈ 28ರವರೆಗಿನ ಕೋವಿಡ್-19 ಸಾವಿನ ಪ್ರಕರಣಗಳನ್ನು ಗಮನಿಸಿದಲ್ಲಿ ಕಪ್ಪು ಜನಾಂಗೀಯ ಹಾಗೂ ದಕ್ಷಿಣ ಏಶ್ಯದ ಜನಾಂಗೀಯ ಹಿನ್ನೆಲೆಯ ವ್ಯಕ್ತಿಗಳು ಬಿಳಿಯ ಜನಾಂಗೀಯ ಹಿನ್ನೆಲೆಯ ವ್ಯಕ್ತಿಗಳಿಗಿಂತ ಕೊರೋನ ವೈರಸ್‌ನಿಂದ ಸಾವನ್ನಪ್ಪುವ ಅಪಾಯ ಹೆಚ್ಚಿರುತ್ತದೆ ಎಂದು ಓಎನ್‌ಎಸ್ ವರದಿ ಹೇಳಿದೆ.

 ಆದಾಗ್ಯೂ ಎಲ್ಲಾ ಜನಾಂಗಗಳಲ್ಲಿಯೂ ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರೇ ಕೋವಿಡ್-19ಗೆ ಬಲಿಯಾಗಿದ್ದಾರೆಂದು ಅದು ಹೇಳಿದೆ.

ಓಎನ್‌ಎಸ್ ತನ್ನ ಹಿಂದಿನ ವಿಶ್ಲೇಷಣೆಯಲ್ಲಿ ಬಾಂಗ್ಲಾದ ಜನಾಂಗೀಯ ಹಿನ್ನೆಲೆಯ ಪುರುಷರು, ಪಾಕಿಸ್ತಾನದ ಹಿನ್ನೆಲೆಯ ಪುರುಷರಿಗಿಂತ ಕೊರೋನ ವೈರಸ್‌ನಿಂದ ಸಾವನ್ನಪ್ಪುವ ಸಾಧ್ಯತೆ ಅಧಿಕವಾಗಿರುವುದಾಗಿ ತಿಳಿಸಿತ್ತು.

 ನೀವು ವಾಸಿಸುವ ಸ್ಥಳ ಹಾಗೂ ನೀವು ಯಾವ ವೃತ್ತಿಯಲ್ಲಿ ತೊಡಗಿರುವಿರಿ ಎಂಬಿತ್ಯಾದಿೆ ಭೌಗೋಳಿಕ, ಜನಸಂಖ್ಯಾತ್ಮಕ ಹಾಗೂ ಸಾಮಾಜಿಕ ಅರ್ಥಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ, ಕೋವಿಡ್19ನಿಂದ ಸಾವನ್ನಪ್ಪುವ ಅಪಾಯದಲ್ಲಿ ವ್ಯತ್ಯಾಸವಿರುವುದನ್ನು ವಿವರಿಸಬಹುದಾಗಿದೆ ಎಂದು ಓಎನ್‌ಎಸ್ ಆರೋಗ್ಯ ಹಾಗೂ ಜೀವನ ಘಟನೆಗಳ ವಿಭಾಗದ ನಿರ್ದೇಶಕ ಬೆನ್ ಹಂಬರ್‌ಸ್ಟೋನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News