ಹೈದರಾಬಾದ್: ಭಾರಿ ಮಳೆಗೆ ಗೋಲ್ಕೊಂಡ ಕೋಟೆಯ ಗೋಡೆ ಕುಸಿತ

Update: 2020-10-18 04:26 GMT

ಹೈದರಾಬಾದ್: ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಗೋಲ್ಕೊಂಡಾ ಕೋಟೆ ಭಾಗಶಃ ಕುಸಿದಿದೆ. ಮಕ್ಕಿ ದರ್ವಾಝದ ಆವರಣಗೋಡೆ ಶನಿವಾರ ಭಾರಿ ಮಳೆಯಿಂದಾಗಿ ಕುಸಿದಿದೆ. ಈ ದ್ವಾರ ಸೇನೆಯ ವಶದಲ್ಲಿದೆ.

ಧಾರಾಕಾರ ಮಳೆಗೆ ಶನಿವಾರ ಮಧ್ಯಾಹ್ನ ಮಕ್ಕಿ ದರ್ವಾಝದ ಆವರಣಗೋಡೆಯ ಮೇಲು ತುದಿ ಕುಸಿದಿದೆ ಎಂದು ಪ್ರಾಚ್ಯವಸ್ತು ಸಂರಕ್ಷಣಾ ಹೋರಾಟಗಾರ ಮುಹಮ್ಮದ್ ಸೈಫುಲ್ಲಾ ಹೇಳಿದ್ದಾರೆ. ಈ ದ್ವಾರದ ಪ್ರದೇಶದಲ್ಲಿ 2017ರಲ್ಲಿ ದುರಸ್ತಿ ಕಾರ್ಯ ನಡೆಸಿದ್ದರೂ, ಕಳೆದ ಕೆಲ ವಾರಗಳಿಂದ ಹೈದರಾಬಾದ್‌ನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಪದೇ ಪದೇ ಇದು ಕುಸಿಯುತ್ತಿರುವುದರಿಂದ ಇದರ ಸಂರಕ್ಷಣೆಗೆ ಒತ್ತು ನೀಡಬೇಕಾದ ಅಗತ್ಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ.

ಗೋಲ್ಕೊಂಡಾ ಕೋಟೆಯ ಎಂಟು ಪ್ರವೇಶ ದ್ವಾರಗಳ ಪೈಕಿ ಮಕ್ಕಿ ದರ್ವಾಝ ಪ್ರಮುಖ ದ್ವಾರವಾಗಿದ್ದು, ಇದರ ಬಾಗಿಲನ್ನು ಸಾಗುವಾನಿ ಮರದಿಂದ ಮಾಡಲಾಗಿದೆ. ಆನೆಗಳ ಮೇಲೆ ಸವಾರಿ ಮಾಡಿಕೊಂಡು ಮಾವುತರು ಹೋಗುವಷ್ಟು ದೊಡ್ಡದು.

ಸುಮಾರು ಐದು ವರ್ಷಗಳ ಹಿಂದೆ ಮೋತಿ ದರ್ವಾಝ ಭಾಗಶಃ ಕುಸಿದು, ಕಮಾನಿನಿಂದ ಪ್ರತ್ಯೇಕಿಸಲ್ಪಟ್ಟಿತ್ತು. ಆ ಬಳಿಕ ಭಾರತದ ಪ್ರಾಚ್ಯವಸ್ತು ಇಲಾಖೆ ಮಕ್ಕಿ ದರ್ವಾಝ, ಟೋಲಿ ಚೌಕಿಯನ್ನು ದುರಸ್ತಿ ಮಾಡಿತ್ತು. ಮತ್ತೆ ಕುಸಿಯದಂತೆ ತಡೆಯಲು ಮಕ್ಕಿ ದರ್ವಾಝಕ್ಕೆ ತಗಡು ಅಳವಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News