ಕೋವಿಡ್-19: ಅಮೆರಿಕದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ

Update: 2020-10-18 04:37 GMT

ಹೊಸದಿಲ್ಲಿ: ಸತತ ಎರಡು ತಿಂಗಳಿಗೂ ಅಧಿಕ ಕಾಲ ವಿಶ್ವದಲ್ಲೇ ಅತ್ಯಧಿಕ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ದೇಶ  ಭಾರತವಾಗಿದ್ದು, ಈ ಅಗ್ರಪಟ್ಟವನ್ನು ಕೊನೆಗೂ ಅಮೆರಿಕಗೆ ಬಿಟ್ಟುಕೊಟ್ಟಿದೆ.

ಅಮೆರಿಕದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಯಲ್ಲಿದ್ದು, ಗುರುವಾರ ಹಾಗೂ ಶುಕ್ರವಾರ ಸತತ ಎರಡು ದಿನಗಳಲ್ಲಿ ಭಾರತಕ್ಕಿಂತ ಅಧಿಕ ಪ್ರಕರಣಗಳು ಅಮೆರಿಕದಲ್ಲಿ ಪತ್ತೆಯಾಗಿವೆ.

ಆಗಸ್ಟ್ 6ರಿಂದೀಚೆಗೆ ನಿರಂತರವಾಗಿ ಭಾರತದಲ್ಲಿ ವಿಶ್ವದಲ್ಲೇ ಅತ್ಯಧಿಕ ಕೋವಿಡ್-19 ಪ್ರಕರಣಗಳು ದಾಖಲಾಗುತ್ತಿದ್ದವು. ಅಮೆರಿಕದಲ್ಲಿ ಕಳೆದ ಎರಡು ದಿನಗಳಲ್ಲಿ ಕ್ರಮವಾಗಿ 66,131 ಮತ್ತು 71,678 ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಈ ಎರಡು ದಿನಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಕ್ರಮವಾಗಿ 64,237 ಮತ್ತು 62,587 ಎಂದು ವರ್ಲ್ಡೋಮೀಟರ್.ಇನ್ಫೋ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಆದರೆ ಈ ಸಂಖ್ಯೆಗಳು ಯುರೋಪಿಯನ್ ಯೂನಿಯನ್‌ನ ಇಸಿಡಿಸಿ ಅಂಕಿ ಅಂಶಗಳಿಗಿಂತ ತುಸು ಭಿನ್ನವಾಗಿದ್ದು, ಆ ಅಂಕಿ ಅಂಶಗಳ ಪ್ರಕಾರವೂ ಗುರುವಾರದಿಂದೀಚೆಗೆ ಅಮೆರಿಕದಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿವೆ.

ಸತತ 71 ದಿನಗಳಿಂದ ಭಾರತದಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗಿದ್ದವು. ಆದರೆ ಗುರುವಾರ ಅಮೆರಿಕದಲ್ಲಿ ಅತ್ಯಧಿಕ ಪ್ರಕರಣ ವರದಿಯಾಗಿದೆ. ಅಮೆರಿಕದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 83 ಲಕ್ಷಕ್ಕೇರಿದ್ದರೆ ಭಾರತ 75 ಲಕ್ಷ ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮುಂದಿನ ಕೆಲ ದಿನಗಳ ಕಾಲ ಅಮೆರಿಕದಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ. ಕಳೆದ ಒಂದು ತಿಂಗಳಿನಿಂದ ಅಮೆರಿಕದಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು, ಭಾರತದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಭಾರತದಲ್ಲಿ ಸೆ. 17ರಂದು ಗರಿಷ್ಠ ಅಂದರೆ 98 ಸಾವಿರ ಪ್ರಕರಣಗಳು ವರದಿಯಾದ ಬಳಿಕ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಅಮೆರಿಕದಲ್ಲಿ ಸಾಂಕ್ರಾಮಿಕದ ಮೂರನೇ ಅಲೆ ಕಾಣಿಸಿಕೊಂಡಿದೆ. ಅಮೆರಿಕದಲ್ಲಿ ಇದುವರೆಗೆ ಸೋಂಕಿನಿಂದ 2.23 ಲಕ್ಷ ಮಂದಿ ಅಸು ನೀಗಿದ್ದರೆ, ಭಾರತದಲ್ಲಿ ಇದರ ಅರ್ಧದಷ್ಟು ಅಂದರೆ 1.14 ಲಕ್ಷ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News