ಭದ್ರತಾ ಸೂಕ್ಷ್ಮತೆಯ ವಸ್ತುಗಳ ರಫ್ತಿಗೆ ಚೀನಾ ನಿರ್ಬಂಧ

Update: 2020-10-18 16:37 GMT

ಬೀಜಿಂಗ್,ಅ.18: ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಚೀನಾವು ಅತ್ಯಂತ ಸಂವೇದನಕಾರಿ ವಸ್ತುಗಳ ರಫ್ತುಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಹೊಸ ಕಾನೂನೊಂದನ್ನು ಶನಿವಾರ ಅಂಗೀಕರಿಸಿದೆ. ವ್ಯಾಪಾರ ಹಾಗೂ ತಂತ್ರಜ್ಞಾನದ ನಡುವೆ ಅಮೆರಿಕ ಹಾಗೂ ಚೀನಾ ನಡುವೆ ಉದ್ವಿಗ್ನತೆ ಭುಗಿಲೆದ್ದಿರುವಂತೆಯೇ, ಶನಿವಾರ ನಡೆದ ಚೀನಾದ ರಾಷ್ಟ್ರೀಯ ಜನತಾ ಕಾಂಗ್ರೆಸ್‌ನ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಕಾನೂನನ್ನು ಅಂಗೀಕರಿಸಲಾಗಿದ್ದು, ಅದು ಡಿಸೆಂಬರ್ 1ರಂದು ಜಾರಿಗೆ ಬರಲಿದೆ.

ನಾಗರಿಕ , ಸೇನಾ ಹಾಗೂ ಪರಮಾಣು ಉತ್ಪನ್ನಗಳಲ್ಲದೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಾಮಾಗ್ರಿಗಳು, ತಂತ್ರಜ್ಞಾನ ಹಾಗೂ ಸೇವೆಗಳು ಈ ಕಾನೂನಿನ ವ್ಯಾಪ್ತಿಗೆ ಬರಲಿವೆ. ರಫ್ತು ನಿಯಂತ್ರಿತ ಸಾಮಾಗ್ರಿಗಳ ಪಟ್ಟಿಯನ್ನು ಸಂಬಂಧಿತ ಇಲಾಖೆಗಳ ಜೊತೆ ಸಮಾಲೋಚನೆಯ ಬಳಿಕ ಕಾಲಾನುಕ್ರಮವಾಗಿ ಪ್ರಕಟಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

   ಅಮೆರಿಕವು ಚೀನಾದ ಟೆಲಿಕಾಂ ಉಪಕರಣಗಳ ತಯಾರಕ ಸಂಸ್ಥೆ ಹುವೈ, ಬೈಟ್‌ಡ್ಯಾನ್ಸ್ ಸಂಸ್ಥೆಯ ಟಿಕ್‌ಟೊಕ್ ಆ್ಯಪ್ ಹಾಗೂ ಮೆಸೇಜಿಂಗ್ ಆ್ಯಪ್ ವಿಚ್ಯಾಟ್ ಅನ್ನು ರಾಷ್ಟ್ರದ ಭದ್ರತೆಗೆ ಬೆದರಿಕೆಯ ಹೆಸರಿನಲ್ಲಿ ನಿಷೇಧಿಸಿದ್ದಕ್ಕೆ ಪ್ರತೀಕಾರವಾಗಿ ಚೀನಾವು ನೂತನ ರಫ್ತು ಕಾನೂನನ್ನು ಜಾರಿಗೊಳಿಸಿದೆಯೆನ್ನಲಾಗಿದೆ.

  ನೂತನ ರಫ್ತು ಕಾನೂನನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರದ ಭದ್ರತೆಗೆ ಧಕ್ಕೆ ತರುವ ಕಂಪೆನಿಗಳು ಹಾಗೂ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಲಾಗುವುದು ಹಾಗೂ ಅವರಿಗೆ 5 ದಶಲಕ್ಷ ಯುವಾನ್ ಅಥವಾ ಅವರ ಅಕ್ರಮವಾಗಿ ನಡೆಸಿದ ವಹಿವಾಟಿನ ಮೌಲ್ಯದ 20 ಪಟ್ಟು ಅಧಿಕ ಹಣವನ್ನು ದಂಡವಾಗಿ ವಿಧಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News