ಚರ್ಮದ ಮೇಲೆ ಕೊರೋನ ವೈರಸ್ 9 ತಾಸು ಜೀವಂತ: ಜಪಾನಿ ವಿಜ್ಞಾನಿಗಳ ಸಂಶೋಧನೆ

Update: 2020-10-18 17:11 GMT

ಟೋಕಿಯೊ,ಅ.18: ಕೊರೋನ ವೈರಸ್ ಮಾನವ ಚರ್ಮದ ಮೇಲೆ ಸುಮಾರು 9 ತಾಸುಗಳ ಕಾಲ ಸಕ್ರಿಯವಾಗಿ ಉಳಿದುಕೊಳ್ಳಬಹುದಾಗಿದೆ ಎಂದು ಜಪಾನಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಕೋವಿಡ್-19 ಸೋಂಕನ್ನು ತಡೆಗಟ್ಟಲು ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವ ಅಗತ್ಯವನ್ನು ಈ ಸಂಶೋಧನೆಯು ದೃಢಪಡಿಸಿದೆ.

ಫ್ಲೂ ಜ್ವರಕ್ಕೆ ಕಾರಣವಾಗುವ ಐಎವಿ ವೈರಸ್, ಮಾನವನ ಚರ್ಮದ ಮೇಲೆ ಕೇವಲ 1.8 ತಾಸುಗಳ ಕಾಲ ಉಳಿದುಕೊಳ್ಳುತ್ತವೆ. ಆದರೆ ಕೋವಿಡ್ 19 ಸೋಂಕಿಗೆ ಕಾರಣವಾಗುವ ಸಾರ್ಸ್‌-ಕೊರೋನವೈರಸ್-2, ಮಾನವ ಚರ್ಮದ ಮೇಲೆ 9 ತಾಸುಗಳವರೆಗೆ ಸಕ್ರಿಯವಾಗಿರುತ್ತದೆ. ಹೀಗಾಗಿ ಕೊರೋನ ವೈರಸ್‌ನಿಂದಾಗಿ ಮಾನವರಿಂದ ಮಾನವರಿಗೆ ಸಂಪರ್ಕದ ಮೂಲಕ ಸೋಂಕು ಹರಡುವ ಅಪಾಯ ಅಧಿಕವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಜಪಾನಿ ವಿಜ್ಞಾನಿಗಳ ತಂಡವು ಕೋವಿಡ್-19 ಸೋಂಕಿತರು ಮೃತಪಟ್ಟ ಒಂದು ದಿನದ ಬಳಿಕ ಅವರ ಚರ್ಮವನ್ನು ಸಂಗ್ರಹಿಸಿ ತಪಾಸಣೆ ನಡೆಸಿತ್ತು. ಆದರೆ ಕೊರೋನ ವೈರಸ್ ಹಾಗೂ ಫ್ಲೂ ವೈರಸ್‌ಗಳೆರಡೂ, ಎಥೆನಾಲ್ ಅಂಶವಿರುವ ಸ್ಯಾನಿಟೈಸರ್‌ಗಳನ್ನು ಲೇಪಿಸಿದ 15 ನಿಮಿಷಗಳೊಳಗೆ ನಾಶಗೊಂಡಿದ್ದವು. ಚರ್ಮದ ಮೇಲೆ ಸಾರ್ಸ್‌-ಕೋವ್-2 ವೈರಸ್ ದೀರ್ಘಕಾಲ ಬದುಕುಳಿಯುವುದು, ಸೋಂಕು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ ಆದಾಗ್ಯೂ ಕೈಗಳನ್ನು ಶುಚಿಯಾಗಿಡುವುದರಿಂದ ಈ ಅಪಾಯ ಕಡಿಮೆಯಾಗಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News