ಸುಳ್ಳು ಹೇಳಿ ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ ಎಂಬ ವೈರಲ್ ವೀಡಿಯೋದ ವಾಸ್ತವವೇನು?

Update: 2020-10-19 08:33 GMT

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಮಹಿಳೆಯೊಬ್ಬರು ಅಮುಲ್ ಪಾರ್ಲರ್ ನಲ್ಲಿ ದಾಂಧಲೆ ನಡೆಸುತ್ತಿರುವ ಘಟನೆ ಸೆರೆಯಾಗಿದೆ. ಮಹಿಳೆಯ ಪತಿ ಸುಳ್ಳು ಹೇಳಿ ಆಕೆಯನ್ನು ಆರ್ಯಸಮಾಜದಲ್ಲಿ ಮದುವೆಯಾಗಿದ್ದಾನೆ. ನಂತರ ಆತನಿಗೆ ಇಬ್ಬರು ಮಕ್ಕಳಿರುವುದು ಗೊತ್ತಾಗಿದೆ ಎಂದು ಮಹಿಳೆ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. 

Full View

ಆದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ, 'ಮುಸ್ಲಿಮ್ ಯುವಕ ಹಿಂದೂ ಯುವತಿಯನ್ನು ಸುಳ್ಳು ಹೇಳಿ ಮದುವೆಯಾಗಿ ಮೋಸ ಮಾಡಿದ್ದಾನೆ' ಎಂಬ ಸಂದೇಶದಲ್ಲಿ ವೈರಲ್ ಆಗುತ್ತಿದೆ. "ಸುಳ್ಳು ಹೇಳಿ ಇಬ್ಬರು ಮಕ್ಕಳ ತಂದೆ ಮುಸ್ಲಿಂ ವ್ಯಕ್ತಿ ಹಿಂದೂ ಯುವತಿಯನ್ನು ಆರ್ಯಸಮಾಜದಲ್ಲಿ ಮದುವೆಯಾಗಿದ್ದಾನೆ. ಹಿಂದು ಯುವತಿಯರು ಈಗ ಅವರ ಹಣೆಬರಹವನ್ನು ಶಪಿಸುತ್ತಿದ್ದಾರೆ" ಎಂದು ಅವನಿ ದವೆ ಎಂಬವರು ಟ್ವೀಟ್ ಮಾಡಿದ್ದಾರೆ. 

ವಾಸ್ತವವೇನು?

ಮಹಿಳೆಯೊಬ್ಬರು ಅಮುಲ್ ಪಾರ್ಲರ್ ನಲ್ಲಿ ದಾಂಧಲೆ ನಡೆಸುತ್ತಿದ್ದ ಸಂದರ್ಭ ಆಕೆ ತನ್ನ ಮದುವೆ ಆರ್ಯಸಮಾಜದಲ್ಲಿ ನಡೆದಿದೆ ಎಂದು ಹೇಳುವುದು ವೀಡಿಯೋದಲ್ಲಿದೆ. ಇದನ್ನು ಆಧಾರವಾಗಿಟ್ಟುಕೊಂಡು ಹುಡುಕಿದ ನಂತರ altnews ಗೆ ಕೆಲವು ಮಾಧ್ಯಮಗಳ ವರದಿ ಲಭ್ಯವಾಗಿದೆ. ಈ ಘಟನೆ ಇಂಧೋರ್ ನ ಭವರ್ಕುವಾ ಎಂಬಲ್ಲಿ ನಡೆದಿದೆ. ಅ.14 ರಂದು 'ದೈನಿಕ್ ಭಾಸ್ಕರ್' ನಲ್ಲಿ ಪ್ರಕಟಗೊಂಡ ಸುದ್ದಿಯ ಪ್ರಕಾರ ಸುಳ್ಳು ಹೇಳಿ ಮದುವೆಯಾದ ವ್ಯಕ್ತಿಯ ಹೆಸರು ಆನಂದ್ ಪಾಟಿಲ್. ಮಿಲ್ಕ್ ಪಾರ್ಲರ್ ನ ಸಂಚಾಲಕ ಆನಂದ್ ತಾನು ಅನಾಥ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ ಎಂದೂ ವರದಿ ಮಾಡಿದೆ. 

'ಭೋಪಾಲ್ ಸಮಾಚಾರ್' ಪತ್ರಿಕೆಯಲ್ಲಿಯೂ ಮಹಿಳೆಯ ಪತಿ ಆನಂದ್ ಪಾಟಿಲ್ ಎಂದು ವರದಿ ಮಾಡಿದೆ. ಅಲ್ಲದೇ ಮಧ್ಯಪ್ರದೇಶದ ಸ್ಥಳಿಯ ನ್ಯೂಸ್ ವೆಬ್ ಸೈಟ್ 'ಸ್ವದೇಶ್' ಕೂಡಾ ಅಂತದ್ದೇ ವರದಿ ಮಾಡಿದೆ.

ಮಹಿಳೆಯು ಮಾಧ್ಯಮದವರೊಂದಿಗೆ ಮಾತನಾಡುವ ವೀಡಿಯೋಂದು altnews ಗೆ ಲಭ್ಯವಾಗಿದ್ದು, ಅದರಲ್ಲಿ ಮಹಿಳೆಯು ತನ್ನ ಹೆಸರು ನೇಹಾ ಪಾಟಿಲ್ ಮತ್ತು ಪತಿಯ ಹೆಸರು ಆನಂದ್ ಪಾಟಿಲ್ ಎಂದು ಹೇಳಿದ್ದಾರೆ. "ಆನಂದ್ ಗೆ 2010 ರಲ್ಲಿ ಮೊದಲ ಮದುವೆ ಆಗಿದೆ. ಆದರೆ ಮದುವೆಯಾದ ವಿಷಯವನ್ನು ನನಗೆ ತಿಳಿಸದೆ ತಾನೊಬ್ಬ ಅನಾಥ ಎಂದು ಹೇಳಿಕೊಂಡು 2017 ರಲ್ಲಿ ತನ್ನನ್ನು ಮದುವೆಯಾಗಿದ್ದ" ಎಂದು ಮಹಿಳೆ ಆರೋಪಿಸಿದ್ದಾರೆ.   

ಈ ವೀಡಿಯೋ 'ಹಿಂದು ಮಹಿಳೆಯನ್ನು ವಿವಾಹಿತ ಮುಸ್ಲಿಂ ವ್ಯಕ್ತಿ ಸುಳ್ಳು ಹೇಳಿ ಮದುವೆಯಾಗಿದ್ದಾನೆ' ಎಂಬ ಸುಳ್ಳು ಸಂದೇಶದೊಂದಿಗೆ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News