×
Ad

ಟ್ರಂಪ್, ಮೋದಿ ನಡುವೆ ಅತ್ಯುತ್ತಮ ಬಾಂಧವ್ಯ: ಡೊನಾಲ್ಡ್ ಟ್ರಂಪ್ ಜೂನಿಯರ್ ಬಣ್ಣನೆ

Update: 2020-10-19 23:43 IST

ನ್ಯೂಯಾರ್ಕ್, ಅ. 19: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಟ್ರಂಪ್‌ರ ಪುತ್ರ ದೊನಾಲ್ಡ್ ಟ್ರಂಪ್ ಜೂನಿಯರ್ ಹೇಳಿದ್ದಾರೆ. ‘‘ಜಗತ್ತಿನಾದ್ಯಂತ ಹರಡುತ್ತಿರುವ ಸಮಾಜವಾದ ಮತ್ತು ಕಮ್ಯುನಿಸ್ಟ್‌ವಾದ’’ದ ವಿರುದ್ಧದ ಬೃಹತ್ ಹೋರಾಟದಲ್ಲಿ ಭಾರತ ಮತ್ತು ಅಮೆರಿಕಗಳು ಜೊತೆಗಿವೆ ಎನ್ನುವುದನ್ನು ಉಭಯ ನಾಯಕರು ತಿಳಿದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ರವಿವಾರ ನಡೆದ ಸಮಾರಂಭವೊಂದರ ವೇಳೆ ನೇಪಥ್ಯದಲ್ಲಿ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್ ಜೂನಿಯರ್, ಟ್ರಂಪ್ ಫೆಬ್ರವರಿಯಲ್ಲಿ ಭಾರತಕ್ಕೆ ನೀಡಿರುವ ಭೇಟಿಯನ್ನು ಸ್ಮರಿಸಿಕೊಂಡರು.

‘‘ನನ್ನ ತಂದೆ ಭಾರತದಲ್ಲಿ ಸ್ವೀಕರಿಸಿದ ಆತಿಥ್ಯವು ಅಭೂತಪೂರ್ವವಾಗಿತ್ತು’’ ಎಂದು ಅವರು ಹೇಳಿದರು.

 ‘ಜೋ ಬೈಡನ್ ಭಾರತದ ವಿರೋಧಿ, ಚೀನಾ ಪರ’

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ಭಾರತಕ್ಕೆ ಆಗುವುದಿಲ್ಲ, ಯಾಕೆಂದರೆ ಅವರು ಚೀನಾದ ಪರ ಮೆದು ಧೋರಣೆ ಹೊಂದಿದ್ದಾರೆ ಎಂದು ಡೊನಾಲ್ಡ್ ಟ್ರಂಪ್‌ರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅಭಿಪ್ರಾಯಪಟ್ಟಿದ್ದಾರೆ.

ಬೈಡನ್ ಕುಟುಂಬ ಸದಸ್ಯರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಒಳಗೊಂಡ ಅವರ ಪುಸ್ತಕದ ‘ಯಶಸ್ಸು’ ಸಂಭ್ರಮ ಸಭೆಯೊಂದರಲ್ಲಿ ಅವರು ಮಾತನಾಡುತ್ತಿದ್ದರು.

 ಆಡಳಿತಾರೂಢ ರಿಪಬ್ಲಿಕನ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಹಾಲಿ ಅಧ್ಯಕ್ಷ ಟ್ರಂಪ್ ಮರು ಆಯ್ಕೆ ಕೋರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News