ಆರೋಪಿಯ 'ತಪ್ಪೊಪ್ಪಿಗೆ ಹೇಳಿಕೆ' ಬಹಿರಂಗಗೊಳಿಸಿದ 'ಝೀ ನ್ಯೂಸ್‍'ಗೆ ಹೈಕೋರ್ಟ್ ತರಾಟೆ

Update: 2020-10-20 08:47 GMT

ಹೊಸದಿಲ್ಲಿ : ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದ ಆರೋಪಿಯೊಬ್ಬನ 'ತಪ್ಪೊಪ್ಪಿಗೆ ಹೇಳಿಕೆಯನ್ನು' ಬಹಿರಂಗಗೊಳಿಸಿದ್ದ ಝೀ ನ್ಯೂಸ್ ವಾಹಿನಿಯನ್ನು ಇಂದು ಪ್ರಶ್ನಿಸಿದ ದಿಲ್ಲಿ ಹೈಕೋರ್ಟ್, ಟಿವಿ ವಾಹಿನಿಯೇನೂ ಕಾನೂನು ಕ್ರಮ ಕೈಗೊಳ್ಳುವ ಪ್ರಾಧಿಕಾರವಲ್ಲ ಹಾಗೂ ವಿಚಾರಣೆಯ ವೇಳೆ "ಕನಿಷ್ಠ ಸಾಕ್ಷ್ಯ ಮೌಲ್ಯ'' ಹೊಂದಿರುವ ಹೇಳಿಕೆಯನ್ನು ಒಬ್ಬ ವ್ಯಕ್ತಿಯನ್ನು ಸಂಪೂರ್ಣ ತಪ್ಪಿತಸ್ಥನನ್ನಾಗಿಸುವ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಎಲ್ಲಿಯೂ ಪ್ರಕಟಿಸುವಂತಹ ದಾಖಲೆ ಅದಲ್ಲ, ಎಂದು ಜಸ್ಟಿಸ್ ವಿಭು ಬಖ್ರು ಹೇಳಿದರಲ್ಲದೆ, ಆರೋಪಿಯದ್ದೆಂದು ಹೇಳಲಾದ ತಪ್ಪೊಪ್ಪಿಗೆ ಹೇಳಿಕೆಯ ಮೂಲವನ್ನು ಬಹಿರಂಗಪಡಿಸಿ ಅಫಿಡವಿಟ್ ಸಲ್ಲಿಸುವಂತೆ ಝೀ ನ್ಯೂಸ್ ಗೆ ಸೂಚಿಸಿದರು. ಆ ನಿರ್ದಿಷ್ಟ ಹೇಳಿಕೆ ಪಡೆದ ಪತ್ರಕರ್ತನ ಹೆಸರನ್ನು ಬಹಿರಂಗಗೊಳಿಸಲು 'ಝೀ ನ್ಯೂಸ್' ಕೋರಿದ ಅನುಮತಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ದಾಖಲಿಸಿದ್ದ ಅಪೀಲಿನ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.  ಪೊಲೀಸ್ ತನಿಖೆ ವೇಳೆ ತನ್ಹಾ ಅವರು ನೀಡಿದ್ದಾರೆನ್ನಲಾದ ತಪ್ಪೊಪ್ಪಿಗೆ ಹೇಳಿಕೆಯನ್ನು ಪೊಲೀಸ್ ಮೂಲಗಳು ಮಾಧ್ಯಮಕ್ಕೆ ಬಹಿರಂಗ ಪಡಿಸಿದ್ದವು ಎಂದು ಆರೋಪಿಸಲಾಗಿತ್ತು. ಆದರೆ ತಮ್ಮ ಯಾವುದೇ ಸಿಬ್ಬಂದಿ ಮಾಹಿತಿ ಸೋರಿಕೆ ಮಾಡಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ ನಂತರ ತನ್ನ ಮಾಹಿತಿಯ ಮೂಲ ಯಾವುದೆಂದು ಬಹಿರಂಗ ಪಡಿಸುವಂತೆ ನ್ಯಾಯಾಲಯ 'ಝೀ ನ್ಯೂಸ್‍'ಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News