ಕೊರೋನ ಕಾರಣಕ್ಕೆ ಜಾಮೀನು, ಪರೋಲ್ ವಿಸ್ತರಣೆ ರದ್ದತಿಯ ಸಮಯ ಬಂದಿದೆ: ದಿಲ್ಲಿ ಹೈಕೋರ್ಟ್

Update: 2020-10-20 17:27 GMT

ಹೊಸದಿಲ್ಲಿ, ಅ.20: ಕೊರೋನ ಸೋಂಕಿನ ಕಾರಣದಿಂದ ಕೈದಿಗಳಿಗೆ ಜಾಮೀನು, ಪರೋಲ್ ಅವಧಿಯನ್ನು ವಿಸ್ತರಿಸುವ ತನ್ನ ಮಧ್ಯಂತರ ಆದೇಶವನ್ನು ಅಂತ್ಯಗೊಳಿಸುವ ಸಮಯ ಬಂದಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. ದೇಶದಲ್ಲಿ ದೈನಂದಿನ ಸೋಂಕಿನ ಪ್ರಕರಣದಲ್ಲಿ ಇಳಿಕೆಯಾಗುತ್ತಿದೆ. ದಿಲ್ಲಿಯ ಜೈಲಿನಲ್ಲಿ 3 ಕೈದಿಗಳು ಮಾತ್ರ ಕೊರೋನ ಸೋಂಕು ಬಾಧಿತರಾಗಿದ್ದಾರೆ. ದಿಲ್ಲಿಯಲ್ಲಿ 6,700 ಕೈದಿಗಳು ಜಾಮೀನು ಅಥವಾ ಪರೋಲ್ ಮೇಲೆ ಬಿಡುಗಡೆಯಾಗಿದ್ದು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಇದನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಕೊರೋನ ಕಾರಣದಿಂದ ವಿಸ್ತರಣೆಯನ್ನು ಅಂತ್ಯಗೊಳಿಸುವ ಸಮಯ ಇದೀಗ ಬಂದಿದೆ. ಇತರ ಕಾರಣಗಳಿಗೆ ಜಾಮೀನು, ಪರೋಲ್ ಅವಧಿ ವಿಸ್ತರಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಈ ವರ್ಷದ ಜನವರಿ-ಫೆಬ್ರವರಿ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಗೆ ಮರಳುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಾಧೀಶ ಡಿಎನ್ ಪಟೇಲ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ಅಭಿಯೋಜಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಹೈಕೋರ್ಟ್ ಈ ನಿಲುವನ್ನು ವ್ಯಕ್ತಪಡಿಸಿದೆ. ಕೊರೋನ ಹಿನ್ನೆಲೆಯಲ್ಲಿ ಪರೋಲ್, ಜಾಮೀನು ಅವಧಿಯನ್ನು ವಿಸ್ತರಿಸುವ ಆದೇಶದಲ್ಲಿರುವ ಗೊಂದಲದ ಲಾಭ ಪಡೆದಿರುವ ಕೆಲವು ಆರೋಪಿಗಳು, ಜಾಮೀನು ಅವಧಿ ಕೊನೆಗೊಂಡ ಬಳಿಕವೂ ನ್ಯಾಯಾಲಯಕ್ಕೆ ಶರಣಾಗುತ್ತಿಲ್ಲ. ಆದ್ದರಿಂದ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ರದ್ದುಗೊಳಿಸಬೇಕು ಎಂದು ಅಭಿಯೋಜಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News