5ನೇ ಬೌಲರ್ ಸ್ಥಾನಕ್ಕೆ ಸಿರಾಜ್-ಠಾಕೂರ್ ಪೈಪೋಟಿ

Update: 2020-10-21 05:41 GMT

ಹೊಸದಿಲ್ಲಿ, ಅ. 20: ಯುವ ಬೌಲರ್ ಮುಹಮ್ಮದ್ ಸಿರಾಜ್ ಮತ್ತು ಶಾರ್ದುಲ್ ಠಾಕೂರ್ ಟೆಸ್ಟ್ ಸರಣಿಯಲ್ಲಿ ಐದನೇ ವೇಗದ ಬೌಲರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ಅವರ ಪ್ರಕಾರ ಹೊಸ ಆಯ್ಕೆ ಸಮಿತಿಯು ಶಿವಂ ಮಾವಿ ಅವರನ್ನು ನೋಡುವ ಸಾಧ್ಯತೆ ಇದೆ. ಅವರು ಭವಿಷ್ಯದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಟೀಮ್ ಇಂಡಿಯಾದ ಬೌಲರ್ ಆಗಲು ಅವರಲ್ಲಿ ಅರ್ಹತೆ ಇದೆ ಎಂದು ಭಾವಿಸುತ್ತಾರೆ.

ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕಾಗಿ ಟೆಸ್ಟ್ ತಂಡದಲ್ಲಿ ಐದನೇ ಬೌಲರ್ ಸ್ಥಾನವನ್ನು ಪಡೆಯಲು ಹೈದರಾಬಾದ್‌ನ ಮುಹಮ್ಮದ್ ಸಿರಾಜ್ ಅವರು ಮುಂಬೈಯ ಶಾರ್ದುಲ್ ಠಾಕೂರ್ ಅವರೊಂದಿಗೆ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ಗುಜರಾತ್ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಭಾರತದ ಏಕೀಕೃತ ತಂಡದಲ್ಲಿ ಅವಕಾಶಕ್ಕಾಗಿ ನೋಡುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ಧ ನಾಲ್ಕು ಟೆಸ್ಟ್‌ಗಳ ಸರಣಿಗೆ ಮುಂಚಿತವಾಗಿ ಎರಡು ಸೀಮಿತ ಓವರ್‌ಗಳ ಸರಣಿಗಳಿಗೆ (ಟ್ವೆಂಟಿ-20 ಮತ್ತು ಏಕದಿನ), ಸುನಿಲ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ಈ ವಾರದ ಕೊನೆಯಲ್ಲಿ ಸಭೆ ಸೇರಿ ಎಲ್ಲಾ ಮೂರು ಸ್ವರೂಪದ ಸರಣಿಗೆ ಜಂಬೊ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.

ಇಬ್ಬರು ಹಿರಿಯ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಗಾಯದಿಂದಾಗಿ ಹೊರಗುಳಿದಿದ್ದರೂ, ನವದೀಪ್ ಸೈನಿ ಖಂಡಿತವಾಗಿಯೂ ಮುಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಉಮೇಶ್ ಯಾದವ್ ನಂತರ ನಾಲ್ಕನೇ ವೇಗಿ ಸ್ಥಾನಕ್ಕೆ ಅವಕಾಶ ಪಡೆಯಲಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಐದನೇ ವೇಗಿ ಅವಕಾಶ ಸಿರಾಜ್‌ಗೆ ಹೋಗಬಹುದು, ಅವರು ಭಾರತ ‘ಎ’ ಮತ್ತು ರಣಜಿ ಟ್ರೋಫಿ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ‘‘ಕಳೆದ ಕೆಲವು ವರ್ಷಗಳಲ್ಲಿ ಸಿರಾಜ್ ಭಾರತ ಎ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಉತ್ತಮ ರೆಡ್ ಬಾಲ್ ಬೌಲರ್ ಮತ್ತು ಆಸ್ಟ್ರೇಲಿಯದ ವಾತಾವರಣದಲ್ಲಿ ಉತ್ತಮ ಪ್ರದರ್ಶನ ನೀಡಬಹುದು’’ ಎಂದು ನಾನು ಭಾವಿಸುತ್ತೇನೆ ಎಂದು ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ಮಂಗಳವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶಾರ್ದುಲ್ ಮತ್ತು ಅವರ ಸಿಎಸ್‌ಕೆ ತಂಡದ ಸಹ ಆಟಗಾರ ದೀಪಕ್ ಚಹರ್ ಖಂಡಿತವಾಗಿಯೂ ವೈಟ್ ಬಾಲ್ ಕ್ರಿಕೆಟ್ ತಂಡದ ಭಾಗವಾಗಲಿದ್ದು, ಅಲ್ಲಿ ಉಮೇಶ್ ಯಾದವ್ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ.

ವಿಕೆಟ್ ಕೀಪರ್‌ಗಳ ಸ್ಥಾನಕ್ಕೆ ನಾಲ್ವರು ಕಣ್ಣಿಟ್ಟಿದ್ದಾರೆ.ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಲೋಕೇಶ್ ರಾಹುಲ್ ಮೊದಲ ಆಯ್ಕೆಯಾಗಲಿದ್ದು, ರಿಷಭ್ ಪಂತ್ (ಎಲ್ಲಾ ಸ್ವರೂಪದ ಕ್ರಿಕೆಟ್) ಮತ್ತು ಸಂಜು ಸ್ಯಾಮ್ಸನ್ (ಟ್ವೆಂಟಿ-20) ಅವರೊಂದಿಗೆ ಪೈಪೋಟಿ ನಡೆಸಲಿದ್ದಾರೆ. ವೃದ್ಧಿಮಾನ್ ಸಹಾ ಟೆಸ್ಟ್ ತಂಡದಲ್ಲಿ ಅವಕಾಶಕ್ಕಾಗಿ ನೋಡುತ್ತಿದ್ದಾರೆ. ಅಂತೆಯೇ, ಭಾರತದ ಎಲ್ಲಾ ಸ್ವರೂಪದ ಕ್ರಿಕೆಟ್ ತಂಡಗಳಲ್ಲಿ ಲಭ್ಯವಿರುವ ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಶುಭ್‌ಮನ್ ಗಿಲ್ ಆರಂಭಿಕ ಆಟಗಾರನ ಸ್ಥಾನಕ್ಕಾಗಿ ನೋಡುತ್ತಿದ್ದಾರೆ. ಸೀಮಿತ ಓವರ್‌ಗಳ ಪಂದ್ಯಗಳಿಗೆ ರಾಹುಲ್ ಮತ್ತು ಶಿಖರ್ ಧವನ್ ಇದ್ದಾರೆ. ಆರು ಮಂದಿ ಆಟಗಾರರು ಹೊಸ ಚೆಂಡನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕವು ಹೆಚ್ಚಾಗಿ ನಾಯಕ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯರ ಮೇಲೆ ಅವಲಂಬಿತವಾಗಿದೆ.

ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಸ್ಪಿನ್ನರ್‌ಗಳು ವಾಷಿಂಗ್ಟನ್ ಸುಂದರ್ (ಕೇವಲ ಟ್ವೆಂಟಿ-20), ಯುಜುವೇಂದ್ರ ಚಹಲ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಸ್ಥಾನ ಪಡೆಯಬಹುದು.

ಅಕ್ಷರ್ ಪಟೇಲ್ ಅವರ ಸಾಧನೆ ಗಮನಕ್ಕೆ ಬಾರದಿರಬಹುದು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಐಪಿಎಲ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್ ತಂಡಕ್ಕೆ ಆರ್.ಅಶ್ವಿನ್, ಜಡೇಜ ಮತ್ತು ಅಗತ್ಯವಿದ್ದರೆ ಕುಲದೀಪ್ ಯಾದವ್ ಸೇರಲಿದ್ದಾರೆ.

ಹನುಮ ವಿಹಾರಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ತಂಡದಲ್ಲಿ ಟೆಸ್ಟ್ ತಜ್ಞರಾಗಿದ್ದಾರೆ.

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಪ್ರವಾಸವು ನವಂಬರ್‌ನಲ್ಲಿ ಸೀಮಿತ ಓವರ್‌ಗಳ ಪಂದ್ಯಗಳೊಂದಿಗೆ ತೆರೆದುಕೊಳ್ಳಲಿದ್ದು, ಟೆಸ್ಟ್ ಸರಣಿಯು ಡಿಸೆಂಬರ್ ಮಧ್ಯದಿಂದ ಪ್ರಾರಂಭವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News