ಅತ್ಯಧಿಕ ಪ್ರಕರಣಗಳು ದಾಖಲಾಗಿದ್ದ ರಾಜ್ಯಗಳಲ್ಲಿ ಕೋವಿಡ್19 ಇಳಿಮುಖ

Update: 2020-10-21 03:51 GMT

ಹೊಸದಿಲ್ಲಿ: ದೇಶದಲ್ಲಿ ಅತ್ಯಧಿಕ ಕೋವಿಡ್-19 ವೈರಸ್ ಸೋಂಕು ಪ್ರಕರಣಗಳಿಂದ ಬಾಧಿತವಾಗಿದ್ದ ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 7.5 ಲಕ್ಷಕ್ಕಿಂತ ಕಡಿಮೆ ಇದೆ.

ಪಶ್ಚಿಮ ಬಂಗಾಳ ಹೊರತುಪಡಿಸಿ, ಅತ್ಯಧಿಕ ಪ್ರಕರಣಗಳು ವರದಿಯಾದ ಹತ್ತು ರಾಜ್ಯಗಳಲ್ಲಿ ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ ಇಳಿದಿದೆ. ಈ ಮಧ್ಯೆ ಅತ್ಯಧಿಕ ಪ್ರಕರಣ ದಾಖಲಾದ ರಾಜ್ಯಗಳ ಪೈಕಿ 10ನೇ ಸ್ಥಾನದಲ್ಲಿದ್ದ ಉತ್ತರ ಪ್ರದೇಶದ ಸ್ಥಾನವನ್ನು ಛತ್ತೀಸ್‍ಗಢ ಆಕ್ರಮಿಸಿಕೊಂಡಿದೆ.

ಮೂರು ತಿಂಗಳಲ್ಲೇ ಮೊದಲ ಬಾರಿಗೆ ದೇಶದಲ್ಲಿ ದಿನದ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ಸೋಮವಾರ ದೇಶಾದ್ಯಂತ ಒಟ್ಟು 10.32 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಇದು ಭಾನುವಾರ ನಡೆಸಿದ ಪರೀಕ್ಷೆಗಿಂತ 32 ಸಾವಿರದಷ್ಟು ಅಧಿಕ. ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಇನ್ನೊಂದೆಡೆಯಾದರೆ, ಇನ್ನೊಂದೆಡೆ ಚೇತರಿಕೆ ಪ್ರಮಾಣ ಕೂಡಾ ಹೆಚ್ಚುತ್ತಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7.5 ಲಕ್ಷಕ್ಕಿಂತ ಕಡಿಮೆ ಇದೆ. ಇದು ಒಟ್ಟು ಪ್ರಕರಣಗಳ ಸಂಖ್ಯೆಯ ಶೇಕಡ 10ಕ್ಕಿಂತ ಕಡಿಮೆ.

ಸೋಮವಾರ ದೇಶದಲ್ಲಿ 46,790 ಪ್ರಕರಣಗಳು ವರದಿಯಾಗಿವೆ. ಜುಲೈ 26ರ ಬಳಿಕ ಇದು ಕನಿಷ್ಠ ಸಂಖ್ಯೆಯಾಗಿದೆ. ಜುಲೈ 27ರಂದು 47703 ಪ್ರಕರಣಗಳು ವರದಿಯಾಗಿದ್ದು, ಬಳಿಕ ಸತತ 84 ದಿನಗಳ ಕಾಲ 50 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 75,97,063ಕ್ಕೇರಿದೆ. ಕ್ರೋಢೀಕೃತ ಧನಾತ್ಮಕತೆ ದರ ಶೇಖಡ 7.9ರಷ್ಟಾಗಿದ್ದು, ಸಾಪ್ತಾಹಿಕ ಸರಾಸರಿ ಶೇಕಡ 5.9ರಷ್ಟಿದೆ. ಸೋಮವಾರ ಪ್ರಕರಣಗಳ ಹೆಚ್ಚಳ ಪ್ರಮಾಣ 4.5%ಗೆ ಇಳಿದಿದ್ದು, ಜೂನ್ ಇಳಿಕ ಇದು ಅತ್ಯಂತ ಕನಿಷ್ಠ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News