ಅಂದು ಮೋದಿಯ ಬಗ್ಗೆ ಅಸೂಯೆ, ಇಂದು ಅವರದೇ ಹೆಸರಿನ ಬಳಕೆ

Update: 2020-10-21 16:37 GMT

ಪಾಟ್ನಾ,ಅ.21: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೆದ್ದರೆ ಅದು ರಾಜ್ಯಕ್ಕೆ ವಿನಾಶಕಾರಿಯಾಗಲಿದೆ ಎಂದು ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಬುಧವಾರ ಹೇಳಿದರು. ರಾಜ್ಯ ಸರಕಾರದ ಅಭಿವೃದ್ಧಿ ದಾಖಲೆಗಳ ವಿರುದ್ಧ ದಾಳಿ ನಡೆಸಿದ ಅವರು, ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಾಡಲಾಗಿರುವ ಸಾಧನೆಗಳನ್ನು ಪ್ರಮುಖವಾಗಿ ಬಿಂಬಿಸುವ ಮೂಲಕ ಮಾತ್ರ ನಿತೀಶ್ ಅಧಿಕಾರಕ್ಕೆ ಮರಳಬಹುದು ಎಂದರು.

‘ಹಾಲಿ ಮುಖ್ಯಮಂತ್ರಿಗಳು ತಪ್ಪಾಗಿ ಈ ಚುನಾವಣೆಯನ್ನು ಗೆದ್ದರೆ ಆಗ ಕಳೆದುಕೊಳ್ಳುವುದು ನಮ್ಮ ರಾಜ್ಯವೇ. ನಮ್ಮ ರಾಜ್ಯವು ಮತ್ತೆ ವಿನಾಶದ ಅಂಚಿಗೆ ತಲುಪಲಿದೆ ಎಂದ ಪಾಸ್ವಾನ್,ಅದೊಂದು ಕಾಲವಿತ್ತು. ಅಸೂಯೆಯಿಂದಾಗಿ ಮೋದಿಯವರನ್ನು ನೋಡಲೂ ನಿತೀಶ್ ಇಷ್ಟ ಪಡುತ್ತಿರಲಿಲ್ಲ. ಇಂದು ಇದೇ ನಿತೀಶ್ ಕೇಂದ್ರದ ಸಾಧನೆಗಳನ್ನು ತನ್ನದೆಂದು ಹೇಳಿಕೊಳ್ಳುವ ಮೂಲಕ ಮೆಚ್ಚುಗೆಯನ್ನು ಗಳಿಸಲು ಪ್ರಯತ್ನಿಸುತ್ತಿದ್ದಾರೆ ’ಎಂದರು.

ನಿತೀಶ್ ವಿರುದ್ಧ ಇತರ ಹಲವು ಆರೋಪಗಳನ್ನೂ ಮಾಡಿದ ಪಾಸ್ವಾನ್,ಅವರು ಜಾತಿವಾದವನ್ನು ಉತ್ತೇಜಿಸುತ್ತಿದ್ದಾರೆ. ಕೋಮುವಾದವನ್ನು ಉತ್ತೇಜಿಸುವ ವ್ಯಕ್ತಿಯ ನಾಯಕತ್ವದಲ್ಲಿ ಬಿಹಾರದ ಅಭಿವೃದ್ಧಿಯನ್ನು ಊಹಿಸುವುದೂ ಸೂಕ್ತವಲ್ಲ ಎಂದರು. ಇದೇ ಸಂದರ್ಭ ಅವರು ಎಲ್‌ಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

243 ಸದಸ್ಯಬಲದ ಬಿಹಾರ ವಿಧಾನಸಭಾ ಚುನಾವಣೆ ಅ.28,ನ.3 ಮತ್ತು ನ.7ರಂದು ನಡೆಯಲಿದ್ದು,ನ.10ರಂದು ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News