ಹತ್ರಸ್ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ವಜಾಗೊಂಡಿದ್ದ ವೈದ್ಯರ ಮರುನೇಮಕಕ್ಕೆ ಆಗ್ರಹ

Update: 2020-10-21 16:49 GMT

ಹೊಸದಿಲ್ಲಿ, ಅ.21: ಹತ್ರಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಆರೋಪದಲ್ಲಿ ಹುದ್ದೆಯಿಂದ ವಜಾಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ಮರು ನೇಮಕ ಮಾಡಿಕೊಳ್ಳಬೇಕೆಂದು ಅಲಿಗಢದ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸ್ಥಾನಿಕ ವೈದ್ಯರು ಒತ್ತಾಯಿಸಿರುವುದಾಗಿ ವರದಿಯಾಗಿದೆ. ಡಾ.ಅಝೀಮ್ ಮಲಿಕ್ ಮತ್ತು ಡಾ.ಉಬೈದ್ ಇಮ್ತಿಯಾಝುಲ್ ಹಕ್‌ರನ್ನು ಅಮಾನತುಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಅಮು ಕುಲಪತಿ ತಾರಿಖ್ ಮನ್ಸೂರ್‌ಗೆ ಪತ್ರ ಬರೆದಿರುವ ಸ್ಥಾನಿಕ ವೈದ್ಯರ ಸಂಘಟನೆ, ವಜಾ ಆದೇಶವನ್ನು ತಕ್ಷಣ ವಾಪಸು ಪಡೆಯುವಂತೆ ಒತ್ತಾಯಿಸಿದೆ ಎಂದು ‘ದಿ ವೈರ್’ ವರದಿ ಮಾಡಿದೆ.

ಇಬ್ಬರು ವೈದ್ಯರ ವಿರುದ್ಧ ಕೈಗೊಂಡಿರುವ ಕ್ರಮ ದ್ವೇಷ ರಾಜಕಾರಣದಿಂದ ಕೂಡಿದೆ ಮತ್ತು ಸ್ವತಂತ್ರ ಧ್ವನಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿದೆ ಎಂದು ಪತ್ರಕ್ಕೆ ಸಹಿ ಹಾಕಿರುವ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಹಂಝ ಮಲಿಕ್ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕಾಶಿಫ್ ಉಲ್ಲೇಖಿಸಿದ್ದಾರೆ. ಆದರೆ, ಹತ್ರಸ್ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಉದ್ಯೋಗಿಯನ್ನು ವಜಾಗೊಳಿಸಿಲ್ಲ ಎಂದು ಆಲಿಗಢ ಮುಸ್ಲಿಂ ವಿವಿ ಆಡಳಿತ ಮಂಡಳಿ ಟ್ವೀಟ್ ಮಾಡಿದೆ. ಡಾ.ಅಝೀಮ್ ‘ಲೀವ್ ವೇಕೆನ್ಸಿ’ ಷರತ್ತಿನಲ್ಲಿ ಕೆಲಸ ಮಾಡುತ್ತಿದ್ದು ಅವರ ಸೇವಾವಧಿ ಅಕ್ಟೋಬರ್ 8ಕ್ಕೆ ಅಂತ್ಯವಾಗಿದೆ. ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡಿದ್ದ ಡಾ.ಉಬೈದ್ ಅವರ ನೇಮಕಾತಿಗೆ ಅನುಮೋದನೆ ದೊರೆತಿಲ್ಲ ಎಂದು ಅಮು ವಕ್ತಾರ ಶಫಿ ಕಿದ್ವಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News