ನಕಲಿ ಟಿಆರ್‌ಪಿ ಹಗರಣ : ಮತ್ತೆರಡು ಚಾನಲ್ ಶಾಮೀಲು

Update: 2020-10-22 04:07 GMT

ಮುಂಬೈ : ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣದ ಬಗ್ಗೆ ವಿಚಾರಣೆ ನಡೆಸುವ ವೇಳೆ ಮತ್ತೆರಡು ಟಿವಿ ಚಾನಲ್‌ಗಳು ಈ ದಂಧೆಯಲ್ಲಿ ತೊಡಗಿರುವುದು ತನಿಖಾ ತಂಡಕ್ಕೆ ತಿಳಿದುಬಂದಿದೆ.

ಈ ಪೈಕಿ ಒಂದು ಸುದ್ದಿ ವಾಹಿನಿಯಾಗಿದ್ದರೆ ಮತ್ತೊಂದು ಮನೋರಂಜನಾ ಚಾನಲ್ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

"ತಮ್ಮ ಚಾನಲ್‌ಗಳನ್ನು ವೀಕ್ಷಿಸುವಂತೆ ಜನರಿಗೆ ಹಣ ನೀಡಿ ಮತ್ತೆ ಎರಡು ಚಾನಲ್‌ಗಳು ಟಿಆರ್‌ಪಿ ಹೆಚ್ಚಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ" ಎಂದು ತನಿಖಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಟಿಆರ್‌ಪಿ ದಂಧೆ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 174, 179, 201 ಮತ್ತು 204ರ ಅನ್ವಯವೂ ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದ್ದಾರೆ.

ಇದಕ್ಕೂ ಮುನ್ನ ಪೊಲೀಸರು, ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 409 (ವಿಶ್ವಾಸಕ್ಕೆ ಧಕ್ಕೆ). 420 (ವಂಚನೆ) 120 (ಬಿ) ಮತ್ತು 34ರ ಅನ್ವಯ ಪ್ರಕರಣ ದಾಖಲಿಸಿದ್ದರು. ಹೊಸ ಸೆಕ್ಷನ್‌ಗಳನ್ನು ಸೇರಿಸಿ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನಲ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜಾಹೀರಾತು ಆದಾಯ ಗಳಿಸುವ ನಿಟ್ಟಿನಲ್ಲಿ ನಕಲಿ ಟಿಆರ್‌ಪಿ ದಂಧೆಯಲ್ಲಿ ಚಾನಲ್‌ಗಳು ತೊಡಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬುಧವಾರ ರಿಪಬ್ಲಿಕ್ ಟಿವಿ ಸಿಎಫ್‌ಓ ಎಸ್.ಸುಂದರಮ್ ಮತ್ತು ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಅವರನ್ನು ತನಿಖಾ ತಂಡ ವಿಚಾರಣೆಗೆ ಗುರಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News