ಏನಿದು ಅನೋಸ್ಮಿಯಾ? ಇದು ಹೇಗೆ ಉಂಟಾಗುತ್ತದೆ?

Update: 2020-10-22 13:23 GMT

ಹಲವರಿಗೆ ಎಳೆಯ ವಯಸ್ಸಿನಲ್ಲಿಯೇ ಘ್ರಾಣಶಕ್ತಿಯನ್ನು ಕಳೆದುಕೊಂಡ ಅನುಭವವಾಗುತ್ತದೆ. ವಾಸನೆಯನ್ನು ಗ್ರಹಿಸುವ ಶಕ್ತಿಯು ಸಂಪೂರ್ಣವಾಗಿ ನಷ್ಟಗೊಂಡಾಗ ಅಂತಹ ಸ್ಥಿತಿಯನ್ನು ಅನೋಸ್ಮಿಯಾ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ವಯಸ್ಸು ಮತ್ತು ಕಾಯಿಲೆಗೆ ಕಾರಣವನ್ನು ಅವಲಂಬಿಸಿ ಭಾಗಶಃ ಅಥವಾ ಸಂಪೂರ್ಣ,ತಾತ್ಕಾಲಿಕ ಅಥವಾ ಶಾಶ್ವತ ನಷ್ಟವಾಗಬಹುದು. ವೃದ್ಧಾಪ್ಯವೂ ಘ್ರಾಣಶಕ್ತಿ ನಷ್ಟಕ್ಕೆ ಕಾರಣವಾಗುತ್ತದೆಯಾದರೂ ಯುವಜನರಲ್ಲಿಯೂ ಇದು ಸಾಮಾನ್ಯವಾಗುತ್ತಿದೆ. ಮಿದುಳಿಗೆ ಗಂಭೀರ ಪೆಟ್ಟು ಅಥವಾ ಟ್ಯೂಮರ್‌ಗಳೂ ವ್ಯಕ್ತಿಯು ಘ್ರಾಣಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ತುಂಬಾ ಅವಧಿಯವರೆಗೆ ಮೂಗಿನ ಭಿತ್ತಿಯಲ್ಲಿ ಒಂದು ಬಗೆಯ ಕಿರಿಕಿರಿಯೂ ಅನೋಸ್ಮಿಯಾವನ್ನು ಸೂಚಿಸುತ್ತದೆ. ಇದು ಗಂಭೀರ ಸಮಸ್ಯೆಯೇನಲ್ಲ,ಆದರೆ ವ್ಯಕ್ತಿಯ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ ಅನೋಸ್ಮಿಯಾದಿಂದ ಬಳಲುತ್ತಿರುವವರು ಕೆಲ ಸಮಯದ ಬಳಿಕ ಬಾಯಿರುಚಿಯನ್ನೂ ಕಳೆದುಕೊಳ್ಳಬಹುದು. ಇದು ವ್ಯಕ್ತಿಯ ಆತ್ಮವಿಶ್ವಾಸದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಘ್ರಾಣಶಕ್ತಿ ಮತ್ತು ರುಚಿ ನಷ್ಟದಿಂದಾಗಿ ಖಿನ್ನತೆಯುಂಟಾಗುತ್ತದೆ. ವಾಸನೆಯನ್ನು ಗ್ರಹಿಸಲು ಸಾಧ್ಯವಾಗದಿದ್ದಾಗ ವ್ಯಕ್ತಿಯ ಸುತ್ತಲಿನ ಎಲ್ಲವೂ ಬದಲಾಗುತ್ತದೆ. ಶೀತವುಂಟಾದಾಗ ವ್ಯಕ್ತಿಯು ಘ್ರಾಣಶಕ್ತಿಯನ್ನು ಕಳೆದುಕೊಳ್ಳಬಹುದು,ಆದರೆ ಕೆಲವು ದಿನಗಳ ಬಳಿಕ ಶೀತವು ಗುಣವಾದಾಗ ಅದು ಮತ್ತೆ ವಾಪಸ್ ಬರುತ್ತದೆ. ಘ್ರಾಣಶಕ್ತಿಯನ್ನು ಶಾಶ್ವತವಾಗಿ ಕಳೆದುಕೊಂಡರೆ ಏನಾಗಬಹುದು ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ?

ಅನೋಸ್ಮಿಯಾಕ್ಕೆ ಕಾರಣಗಳು

ವೃದ್ಧರಿಗೆ ಮಾತ್ರ ಅನೋಸ್ಮಿಯಾ ಕಾಡುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಕಡಿಮೆ ಪ್ರಾಯದವರನ್ನು,ಅಷ್ಟೇ ಏಕೆ...ಮಕ್ಕಳನ್ನೂ ಈ ಸಮಸ್ಯೆ ಕಾಡುತ್ತದೆ. ಸಾಮಾನ್ಯ ಶೀತದಿಂದ ಹಿಡಿದು ಮೂಗು ಕಟ್ಟುವವರೆಗೆ ಹಲವಾರು ಕಾರಣಗಳಿಂದ ಅನೋಸ್ಮಿಯಾ ಉಂಟಾಗುತ್ತದೆ.

ಮೂಗಿಗೆ ಪೆಟ್ಟು,ವಿಷಯುಕ್ತ ರಾಸಾಯನಿಕಗಳ ಉಸಿರಾಟ,ಸಾಮಾನ್ಯ ಶೀತ,ಸೈನಸ್ ಸೋಂಕುಗಳು,ಮೂಗು ಕಟ್ಟಿಕೊಂಡಿರುವುದು, ಅಲರ್ಜಿ,ಧೂಮ್ರಪಾನ,ಅತಿಯಾಗಿ ಕೊಕೇನ್ ಸೇವನೆ,ವೃದ್ಧಾಪ್ಯ,ಮೂಗಿನಲ್ಲಿ ಬೆಳೆದಿರುವ ದುರ್ಮಾಂಸ ಇತ್ಯಾದಿಗಳು ಘ್ರಾಣಶಕ್ತಿ ನಷ್ಟವನ್ನುಂಟು ಮಾಡುತ್ತವೆ.

ಚಿಕಿತ್ಸೆ ಹೇಗೆ?

ಅಲರ್ಜಿ ಅಥವಾ ಶೀತದಿಂದಾಗಿ ಘ್ರಾಣಶಕ್ತಿ ನಷ್ಟವುಂಟಾಗಿರಬಹುದು ಎಂದು ಯಾವಾಗಲೂ ಭಾವಿಸಬೇಡಿ. ಇತರ ಕಾರಣಗಳಿಂದಲೂ ಅನೋಸ್ಮಿಯಾ ಉಂಟಾಗಿರಬಹುದು. ಘ್ರಾಣಶಕ್ತಿ ನಷ್ಟವನ್ನು ಅಳೆಯುವುದು ಕಷ್ಟ. ವೃದ್ಧಾಪ್ಯದಿಂದ ಅನೋಸ್ಮಿಯಾ ಉಂಟಾಗಿದ್ದರೆ ಅದಕ್ಕೆ ಚಿಕಿತ್ಸೆ ಸಾಧ್ಯವಿಲ್ಲ. ಕೆಲವು ಜೀವನಶೈಲಿ ಬದಲಾವಣೆಗಳ ಮೂಲಕ ಘ್ರಾಣಶಕ್ತಿ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.

►ಧೂಮ್ರಪಾನವನ್ನು ವರ್ಜಿಸಿ

ನಿಮಗೆ ಧೂಮ್ರಪಾನದ ಚಟವಿದ್ದರೆ ನೀವು ಅನೋಸ್ಮಿಯಾಕ್ಕೆ ಸುಲಭದ ಗುರಿಯಾಗುತ್ತೀರಿ. ನೀವು ಈಗಾಗಲೇ ಅನೋಸ್ಮಿಯಾದಿಂದ ಬಳಲುತ್ತಿದ್ದರೆ ಧೂಮ್ರಪಾನದ ಚಟವನ್ನು ವರ್ಜಿಸುವುದು ನಿಜಕ್ಕೂ ನಿಮಗೆ ನೆರವಾಗುತ್ತದೆ.

►ಧೂಳು ಮತ್ತು ಹೊಗೆಗೆ ಒಡ್ಡಿಕೊಳ್ಳುವುದನ್ನು ನಿವಾರಿಸಿ

ಧೂಳು ಮತ್ತು ಹೊಗೆ ಇವು ಅನೋಸ್ಮಿಯಾವನ್ನುಂಟು ಮಾಡುವ ಪ್ರಮುಖ ಕಾರಣಗಳಾಗಿವೆ. ಹೀಗಾಗಿ ಇವುಗಳಿಂದ ರಕ್ಷಿಸಿಕೊಳ್ಳಲು ಮನೆಯಿಂದ ಹೊರಗೆ ತೆರಳುವಾಗ ಮಾಸ್ಕ್ ಧರಿಸಿ.

►ನೇಸಲ್ ಸ್ಪ್ರೇ

ಅನೋಸ್ಮಿಯಾ ಹೆಚ್ಚಾಗಿ ಮೂಗು ಕಟ್ಟಿಕೊಂಡಾಗ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನೇಸಲ್ ಸ್ಪ್ರೇ ಬಳಸುವುದರಿಂದ ಕಟ್ಟಿಕೊಂಡ ಮೂಗು ತೆರೆದುಕೊಳ್ಳುತ್ತದೆ ಮತ್ತು ಮೂಗಿನಲ್ಲಿ ತಂಪಾದ ಅನುಭವದೊಂದಿಗೆ ಘ್ರಾಣಶಕ್ತಿಯೂ ಮರಳುತ್ತದೆ.

►ಆ್ಯಂಟಿ ಬಯಾಟಿಕ್‌ಗಳು

ವೈದ್ಯರ ಸಲಹೆಯಿಲ್ಲದೇ ಯಾವುದೇ ಔಷಧಿಯನ್ನು ಸೇವಿಸಬಾರದು ಎನ್ನುವುದು ನೆನಪಿರಲಿ. ಮೂಗು ಕಟ್ಟಿಕೊಂಡಿರುವುದನ್ನು ನಿವಾರಿಸಲು ಆ್ಯಂಟಿ ಬಯಾಟಿಕ್‌ಗಳಂತಹ ಕೆಲವು ಉತ್ತಮ ಔಷಧಿಗಳಿವೆ. ಆದರೆ ಇವುಗಳನ್ನು ನಿಮ್ಮ ವೈದ್ಯರು ಸೂಚಿಸಿದರೆ ಮಾತ್ರ ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News